ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ,  ಕೇಂದ್ರ ಸಚಿವ ಜೋಶಿ ವಾಗ್ದಾಳಿ

IMG_20240924_200747_807-2.jpg
Published on

ಹುಬ್ಬಳ್ಳಿ: ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ನೀಡುತ್ತಿದೆ. ಇದನ್ನು ರಾಜ್ಯದ ಜನರಿಗೆ ಅನ್ನಭಾಗ್ಯ ಹೆಸರಿನಲ್ಲಿ ತಲುಪಿಸುವಲ್ಲಿ ಅನೇಕ ಗೊಂದಲಗಳನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸುತ್ತಿದೆ. ಅಲ್ಲದೇ ಹಣಕಾಸಿನ ವ್ಯವಸ್ಥೆ ಸರಿಯಾಗಿ ಇಟ್ಟುಕೊಳ್ಳದೇ ಆರ್ಥಿಕ ದಿವಾಳಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಭಾರತೀಯ ಆಹಾರ ನಿಗಮದ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಒಂದು ಕಡೆ ಸಾರ್ವಜನಿಕ ವಿತರಣೆಗಾಗಿ ರೈತರಿಂದ ಜೋಳ ಖರೀದಿ ಮಾಡುತ್ತೇವೆ ಎನ್ನುತ್ತಾರೆ. ಅದಕ್ಕೆ ಅನುಮತಿ ನೀಡಿದರೂ ರೈತರಿಗೆ ಪಾವತಿ ಮಾಡಬೇಕಾದ ಹಣ ನೀಡದೇ ಅನ್ನದಾತನಿಗೂ ಕಿರಿಕಿರಿ ಮಾಡುತ್ತಾರೆ. ರೈತರಿಗೆ ಕೊಡಬೇಕಾದ ಹಣ ಪಾವತಿಸಿದರೆ ಆನಂತರ ಕೇಂದ್ರ ಸರ್ಕಾರ ಅದನ್ನು ರಾಜ್ಯ ಸರ್ಕಾರಕ್ಕೆ ಮರುಪಾವತಿ ಮಾಡಲಿದೆ. ಇದಕ್ಕೂ ಇವರ ಬಳಿ ಹಣ ಇಲ್ಲ. ಹಾಗಾಗಿಯೇ ಆರ್ಥಿಕ ದಿವಾಳಿಯಾಗಿದೆ ಎಂದು ಹೇಳಬೇಕಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ಅವರು ತಮ್ಮ ಕುರ್ಚಿಗಾಗಿ ದೆಹಲಿ ಪ್ರವಾಸ ಮಾಡಿದ್ದಾರೆ. ನೆಪ ಮಾತ್ರಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವರ ಭೇಟಿಗೆ ಸಿಗದಿರುವುದು ಅಚ್ಚರಿಯ ಸಂಗತಿ. ಒಂದು ರಾಜ್ಯದ ಸಿಎಂ ಭೇಟಿಗೆ ಅವರು ಸಿಗುವುದಿಲ್ಲ ಎಂದರೆ ಎಂಥ ದುರ್ದೈವ. ಇದನ್ನೆಲ್ಲ ನೋಡಿದರೆ ಕಾಂಗ್ರೆಸ್ ಪಕ್ಷ ಎಲ್ಲ ನಿಯಂತ್ರಣಗಳನ್ನು ಕಳೆದುಕೊಂಡಿದೆ ಎಂದರು.

ರಾಜ್ಯ ಸರ್ಕಾರ ಎಲ್ಲ ಕ್ಷೇತ್ರದಲ್ಲಿಯೂ ವಿಫಲವಾಗಿದೆ. ಜೈಲಿನಲ್ಲಿ ಮೊಬೈಲ್ ಮುಂತಾದ ವಸ್ತುಗಳು ಸಿಗುತ್ತಿವೆ. ಇದನ್ನೆಲ್ಲ ನೋಡಿದರೆ ರಾಜ್ಯವು ಭಯೋತ್ಪಾದಕರ ಸ್ವರ್ಗವಾಗಿ ಪರಿಣಮಿಸುತ್ತಿದೆ. ಕೇಂದ್ರ ಸರ್ಕಾರ ಭಯೋತ್ಪಾದನೆ ವಿಚಾರದಲ್ಲಿ ಜೀರೋ ಟಾಲರನ್ಸ್ ನೀತಿ ಅನುಸರಿಸುತ್ತಿದೆ ಎಂದರು.

ಸಿದ್ದರಾಮಯ್ಯ ಅವರು ಈಗ ನಾನೇ ಸಿಎಂ ಎಂದು ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಸಿಎಂ ಅಥವಾ ಡಿಸಿಎಂ ಇಲ್ಲವೆ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಬೇಕು. ಜನರಿಗೆ ಸುಳ್ಳು ಹೇಳುವುದು ಬೇಡ. ಈ ಹಿಂದೆ ನನ್ನನ್ನು ಭೇಟಿ ಮಾಡಿದಾಗ ಕಾಂಗ್ರೆಸ್ ನಾಯಕರು ಕೆಲ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಅದರ ಹೊರತು ರಾಜಕೀಯ ಚರ್ಚೆ ಮಾಡಿಲ್ಲ. ಬಿಜೆಪಿಗೆ ಅಧಿಕಾರ ಹಿಡಿಯುವಷ್ಟು ಶಾಸಕರ ಸಂಖ್ಯೆ ಇಲ್ಲ. ಸಂಪೂರ್ಣ ಜನಾದೇಶ ಸಿಗುವವರೆಗೂ ಬಿಜೆಪಿ ಸರ್ಕಾರ ರಚನೆ ಮಾಡುವ ಯಾವುದೇ ಆಶಯ ಇಲ್ಲ ಎಂದು ಉತ್ತರಿಸಿದರು.

ಕರ್ನಾಟಕ ಸೇರಿ ಎಲ್ಲ ಕಡೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿವೆ. ಇದು ಸಾಮಾನ್ಯ ಪ್ರಕ್ರಿಯೆ. ಆ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net