

ಹಾನಗಲ್ಲ: ಹಿಂದು ಹಬ್ಬಗಳು ಬಂದಾಗ ಸರ್ಕಾರ ಹಾಗೂ ಜಿಲ್ಲಾಡಳಿತ ಡಿಜೆ ನಿಷೇಧ ಸೇರಿದಂತೆ ಹತ್ತು ಹಲವು ನಿರ್ಬಂಧ ಹಾಕುತ್ತಿವೆ. ತಾಲೂಕಿನಲ್ಲಿ ಡಿಜೆ ನಿಷೇಧ ತೆರವುಗೊಳಿಸುವವರೆಗೆ ಗಣಪತಿಗಳ ವಿಸರ್ಜನೆ ಮಾಡುವುದಿಲ್ಲ ಎಂದು ತಾಲೂಕು ಗಣಪತಿ ಮಹಾಮಂಡಳಗಳ ಒಕ್ಕೂಟದ ಪ್ರಮುಖ ರವಿಚಂದ್ರ ಪುರೋಹಿತ ಪ್ರಕಟಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಒಂದಿಲ್ಲೊಂದು ತಕರಾರು ತೆಗೆಯುವುದು ಜಿಲ್ಲಾಡಳಿತಕ್ಕೆ ಸರ್ವೆ ಸಾಮಾನ್ಯವಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಲ್ಲದ ಡಿಜೆ ನಿಷೇಧ ಹಾವೇರಿ ಜಿಲ್ಲೆಗೇಕೆ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳ ಮೆರವಣಿಗೆಗೇಕೆ ಇಂತಹ ನಿಷೇಧವಿಲ್ಲ. ಇಡೀ ರಾಜ್ಯದಲ್ಲಿ ಹತ್ತು ಹಲವು ಮಾಲಿನ್ಯಗಳಿಗೆ ಕಣ್ಣುಮುಚ್ಚಿ ಕುಳಿತುಕೊಳ್ಳುವ ಸರ್ಕಾರಿ ಆಡಳಿತ ವ್ಯವಸ್ಥೆಗೆ ಗಣಪತಿ ವಿಸರ್ಜನೆಯ ವಿಷಯ ಬಂದಾಗ ಮಾತ್ರ ಎಲ್ಲ ಮಾಲಿನ್ಯಗಳ ಮಾತು ಆರಂಭವಾಗುತ್ತವೆ. ಇದಕ್ಕೆಲ್ಲ ಹಿಂದು ವಿರೋಧಿ ಪಿತೂರಿಯೇ ಕಾರಣ. ಇದಕ್ಕೆಲ್ಲ ಜಗ್ಗುವುದಿಲ್ಲ. ಹಾನಗಲ್ಲ ತಾಲೂಕಿನಲ್ಲಿ ಡಿಜೆ ಮೆರವಣಿಗೆ ಸಹಿತ ಗಣಪತಿ ವಿರ್ಸರ್ಜನೆಗೆ ನಾವು ನಿರ್ಧರಿಸಿದ್ದು, ಜಿಲ್ಲಾ, ತಾಲೂಕು ಆಡಳಿತ ಡಿಜೆ ಮೆರವಣಿಗೆಗೆ ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದರು.
ಸೆ.4ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಅಂದಾಜು 800 ಸಾರ್ವಜನಿಕ ಗಜಾನನೋತ್ಸವ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆ ನಡೆಸಿ, ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಗಣಪತಿ ವಿಸರ್ಜಿಸಲು ಡಿಜೆ ಪರವಾನಗಿ ನೀಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಲಾಗುತ್ತಿದೆ. ಡಿಜೆ ಕುರಿತು ನಮ್ಮ ನಿರ್ಧಾರ ಅಚಲ. ಅದೆಷ್ಟೇ ಕಾಲ ಮಿತಿ ಆದರೂ ನಾವು ಅದಕ್ಕೆ ಬದ್ಧ. ಡಿಜೆ ಇಲ್ಲದೆ ಇಡೀ ತಾಲೂಕಿನಲ್ಲಿ ಯಾವುದೇ ಸಾರ್ವಜನಿಕ ಗಣಪತಿ ವಿಸರ್ಜಿಸಬಾರದೆಂದು ಇಂದು ನಡೆದ ಸಭೆಯಲ್ಲಿ ತೀರ್ವನಿಸಲಾಗಿದೆ ಎಂದು ವಿವರಿಸಿದರು.
ವಿವಿಧ ಗಜಾನನೋತ್ಸವ ಸಮಿತಿಗಳ ಮುಖಂಡರಾದ ಹರೀಶ ಹಾನಗಲ್ಲ, ವಿಶ್ವನಾಥ ಬಾಳೂರ, ಬಸವಣ್ಣೆಯ್ಯ ಸಾಲಿಮಠ, ಪವನ ಜಾಬಿನ, ಸಚಿನ್ ರಾಮಣ್ಣನವರ, ಮನೋಜ ಕಲಾಲ, ಬಸವರಾಜ ಮಟ್ಟಿಮನಿ, ಮಣಿಕಂಠ ಹಾರನಹಳ್ಳಿ, ರಾಜು ಡಂಬಳ, ಅರವಿಂದ ಮಹಾಂತಿನಮಠ, ರಜತ ಕಲಾಲ, ತುಳಜೇಶ ಮೂಲಿಮನಿ, ಆರ್.ಎನ್.ಕಲಾಲ, ಮನೋಜ ಕಮಾಟಿ ಇದ್ದರು.