ಮುಳಗುಂದದಲ್ಲಿ ಜೂಜಾಟಕ್ಕಿಲ್ಲ ಪೊಲೀಸರ ಅಂಕುಶ

222
Published on

ವಿರುಪಾಕ್ಷ ಕಣವಿ ಮುಳಗುಂದ
ಐತಿಹಾಸಿಕ ಹಿನ್ನೆಲೆಯ ಮುಳಗುಂದ ಪಟ್ಟಣ ಅಭಿವೃದ್ಧಿ ವಿಚಾರ, ರಾಜಕೀಯ, ಶಿಕ್ಷಣ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಹೆಸರುವಾಸಿಯಾದ ಪಟ್ಟಣ. ಈಗ ಇಸ್ಪೀಟ್ ಜೂಜಾಟದಂತಹ ಅಕ್ರಮ ದಂಧೆಯಲ್ಲಿ ಗದಗ ಜಿಲ್ಲೆಯಲ್ಲಿ ಕುಖ್ಯಾತಿ ಪಡೆದಿದೆ. ಜೂಜಾಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಯಾರ ಭಯವಿಲ್ಲದೆ ರಾಜರೋಷವಾಗಿ ಹಗಲುರಾತ್ರಿ ಎಗ್ಗಿಲ್ಲದೆ ನಡೆಯುತ್ತಿದೆ.
ಪಟ್ಟಣಕ್ಕೆ ಯಳವತ್ತಿ, ಮಾಗಡಿ, ಚಿಂಚಲಿ, ಕಲ್ಲೂರ, ಶಿರಹಟ್ಟಿ, ಅಕ್ಕಿಗುಂದ, ಲಕ್ಷ್ಮೇಶ್ವರ ಸೇರಿ ಅಕ್ಕ ಪಕ್ಕದ ಊರುಗಳಿಂದ ಇಸ್ಪೀಟ್ ಆಡಲು ಗ್ಯಾಂಬ್ಲರ್‌ಗಳು ಬರುತ್ತಾರೆ.
ಮಧ್ಯಾಹ್ನ ೨ಕ್ಕೆ ಪ್ರಾರಂಭ: ನಿರ್ಜನ ಪ್ರದೇಶದಲ್ಲಿ ಸರಿಯಾಗಿ ಮಧ್ಯಾಹ್ನ ೨ಗಂಟೆಗೆ ಜೂಜಾಟ ಪ್ರಾರಂಭವಾಗುತ್ತದೆ. ಇದನ್ನು ಪ್ರಾರಂಭಿಸುವ ಮೊದಲು ಇವತ್ತು ಎಲ್ಲಿ ಹೇಗೆ ಆಟ ನಡೆಯುತ್ತೆ ಎನ್ನುವುದರ ಚರ್ಚೆಯಾಗಿರುತ್ತದೆ. ಆ ಸ್ಥಳಕ್ಕೆ ಜೂಜುಕೋರರು ಬಂದು ಸೇರುತ್ತಾರೆ.
ಕಾವಲುಗಾರರು: ಜೂಜು ಆಡುವಾಗ ಪೊಲೀಸರು ಬಂದರೆ ಅದಕ್ಕೆ ಮುಂದಾಲೋಚನೆ ಮಾಡಿಕೊಂಡು ಇಬ್ಬರು, ಮೂವರನ್ನು ಆಟ ಪ್ರಾರಂಭವಾಗುವ ಮೊದಲೇ ಪ್ರದೇಶದಿಂದ ಸಲ್ಪ ದೂರದಲ್ಲಿ ಸುತ್ತ ನಿಂತು ಪೊಲೀಸ್ ಬಂದರೆ ಸಿಗ್ನಲ್ ನೀಡಿ ಆ ಪ್ರದೇಶದಿಂದ ಜಾಗ ಬಿಡುವಂತೆ ಸೂಚನೆ ನೀಡುತ್ತಾರೆ. ಇವರಿಗೆ ತಲಾ ೫೦೦ ರೂ. ಸಂಬಳ ಸಹ ನೀಡುತ್ತಾರೆ.
ಗುಟ್ಖಾ, ಮದ್ಯ ಸರಬರಾಜು: ಜೂಜಾಟ ಆಡುವವರಿಗೆ ಸ್ಥಳದಲ್ಲಿಯೇ ಗುಟ್ಖಾ, ಮದ್ಯ ಸರಬರಾಜು ಮಾಡಲಿಕ್ಕೆ ಸಂಬಳ ಕೊಟ್ಟು ಕೆಲವರನ್ನು ನೇಮಿಸಿಕೊಂಡಿದ್ದಾರೆೆ. ನೀರು ತರುವುದಕ್ಕಾಗಿಯೇ ಒಬ್ಬರು ಇರುತ್ತಾರೆ. ಇಸ್ಪೀಟ್ ಆಡಲು ಬಂದವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತದೆ.
ಕೆಲವರು ಸೇರಿ ತೋಟ, ಗದ್ದೆ, ಗುಡ್ಡ, ಹಳ್ಳ ಹೀಗೆ ನಿರ್ಜನ ಪ್ರದೇಶಗಳಲ್ಲಿ ಆಟ ಹಾಕಿಸುತ್ತಾರೆ. ಒಂದು ಆಟಕ್ಕೆ ಲಕ್ಷಾಂತರ ರೂ.ಗಳ ಆಟ ನಡೆಯುತ್ತದೆ. ಆಟ ಆಡಿಸುವವರಿಗೆ ಕಮಿಷನ್ ನಿಗದಿ ಆಗಿರುತ್ತದೆ. ಆ ಹಣವೇ ದಿನಕ್ಕೆ ೧೦-೧೫ ಸಾವಿರ ವರೆಗೆ ಸಂಗ್ರಹ ಆಗುತ್ತದೆ.
ರಾಜಕೀಯ ನಾಯಕರ ಕೃಪಾಕಟಾಕ್ಷ: ಈ ಅಕ್ರಮ ದಂಧೆಗೆ ಬೆನ್ನೆಲುಬಾಗಿ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡ ಮರಿಪುಡಾರಿಗಳ ಕೃಪಾಕಟಾಕ್ಷವು ಇದೆ. ಒಂದು ವೇಳೆ ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ ನಡೆಸಿದರೆ ರಾಜಕೀಯ ಮರಿಪುಡಾರಿಗಳಿಗೆ ಫೋನ್ ಕರೆಗಳು ಬರುತ್ತವೆ. ರೇಡ್‌ನಲ್ಲಿ ಬೈಕ್ ಸಿಕ್ಕರೆ ಅವುಗಳನ್ನು ಠಾಣೆಗೆ ಬಂದು ದುಡ್ಡು ಕೊಟ್ಟು ಬಿಡಿಸಿಕೊಂಡು ಹೋಗಲಾಗುತ್ತದೆ. ಯಾವುದೇ ಪ್ರಕರಣ ದಾಖಲಾಗುತ್ತಿಲ್ಲ ಎಂದು ಜನ ಆರೋಪಿಸಿದ್ದಾರೆ. ಇದರಿಂದ ಪಟ್ಟಣದಲ್ಲಿ ಈ ಅಕ್ರಮ ಹೆಮ್ಮರವಾಗಿ ಬೆಳೆದು ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ರೀತಿಯಲ್ಲಿ ಬೆಳೆದು ನಿಂತಿದೆ.
ಕುಟುಂಬಗಳು ಬೀದಿಪಾಲು: ಈ ದಂಧೆಯಲ್ಲಿ ಹಲವಾರು ಕುಟುಂಬಗಳು ನೆಲಕಚ್ಚಿವೆ. ಹಣ ಕಳೆದುಕೊಂಡ ಕುಟುಂಬಗಳ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಪರಿಸ್ಥಿತಿ ನೋಡಿ ಕೊರಗುವಂತಾಗಿದೆ. ಇದರಿಂದ ಎಷ್ಟೋ ಕುಟುಂಬಗಳ ಸದಸ್ಯರು ತಮ್ಮ ಆಸ್ತಿ, ಪತ್ನಿಯರ ತಾಳಿ ಮಾರುವ ಹೀನ ಕೃತೃಕ್ಕೂ ಇಳಿದಿದ್ದಾರೆ.

ಪೊಲೀಸರ ವೈಫಲ್ಯ
ಮುಳಗುಂದ ಪಟ್ಟಣದಲ್ಲಿ ಈ ಜೂಜಾಟ ಯಾರ ಭಯವಿಲ್ಲದೆ ನಡೆದಿದೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಪೊಲೀಸ್ ಠಾಣೆ ಇದ್ದರೂ ಅಲ್ಲಿನ ಸಿಬ್ಬಂದಿ ಸ್ಥಳೀಯ ರಾಜಕೀಯ ಪ್ರಭಾವಕ್ಕೆ ಮಣಿದು ಕೆಲಸ ಮಾಡುತ್ತಾರೆ. ಇದರಿಂದ ಯುವಕರು, ಮಕ್ಕಳ ಮೇಲೆ ದುಷ್ಪ್ಪರಿಣಾಮ ಬೀರುತ್ತದೆ. ಸಂಪೂರ್ಣ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಮಟ್ಟ ಹಾಕುತ್ತಿದ್ದೇವೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅವರ ಮೇಲೆ ಕ್ರಮ ಜರುಗಿಸಿ ಕ್ರಿಮಿನಲ್ ಕೇಸ ದಾಖಲಿಸಲಾಗುತ್ತದೆ. ಜತೆಗೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ನಮ್ಮ ಸಿಬ್ಬಂದಿಗೆ ಈ ಬಗ್ಗೆ ಕ್ರಮ ಜರುಗಿಸಲು ಆದೇಶಿಸುತ್ತೇನೆ.ಬಿ.ಎಸ್. ನೇಮಗೌಡ, ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net