

ತುಮಕೂರು: ಹಿಂದುಳಿದ ಜಾತಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ ಈ ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಸ್ಥಾಪಿಸಿರುವ ದೇವರಾಜ ಅರಸು ನಿಗಮಕ್ಕೆ ಈ ವರ್ಷ ನಯಾ ಪೈಸೆ ಅನುದಾನ ಬಿಡುಗಡೆಯಾಗಿಲ್ಲ.
ಇನ್ನುಳಿದಂತೆ ಉಪ್ಪಾರ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬೆರಳೆಣಿಕೆಯ ಗುರಿ ನೀಡಿರುವುದರಿಂದ ಜಿಲ್ಲೆಯಲ್ಲಿ ಸರ್ಕಾರದ ಯೋಜನೆ ನಂಬಿ ಅರ್ಜಿ ಸಲ್ಲಿಸಿರುವ ಸಾವಿರಾರು ಜನರಿಗೆ ನಿರಾಸೆಯಾಗಿದೆ.
ಬಹುಸಂಖ್ಯೆಯಲ್ಲಿರುವ ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ನೀಡುತ್ತಿದ್ದ ಅನುದಾನ ಸಂಪೂರ್ಣ ನಿಲ್ಲಿಸಲಾಗಿದ್ದು ಇನ್ನೂ ಕಾರ್ಯಕ್ರಮದ ಪಟ್ಟಿಯೇ ಬಂದಿಲ್ಲ, ಕಳೆದ ಆರ್ಥಿಕ ವರ್ಷದಲ್ಲಿ ನಿಗಮಕ್ಕೆ 4.85ಕೋಟಿ ರೂ. ನೀಡಲಾಗಿದ್ದು 120 ಲಾನುಭವಿಗಳು ಕೊಳವೆಬಾವಿ ಪಡೆದಿದ್ದಾರೆ.
ಅನುದಾನ ಇಲ್ಲದಿದ್ದರೂ ಅರ್ಜಿ ಏಕೆ?: ಬಹುತೇಕ ನಿಗಮದಲ್ಲಿ ವೈಯಕ್ತಿಕ ಸಾಲ, ಅರಿವು ಸಾಲ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಇಡೀ ಜಿಲ್ಲೆಗೆ 2 ಅಥವಾ 3ಲಾನುಭವಿಗಳ ಆಯ್ಕೆಗಷ್ಟೇ ಸರ್ಕಾರದ ಅನುದಾನದಲ್ಲಿ ಸೌಲಭ್ಯ ನೀಡಲು ಸಾಧ್ಯವಿದ್ದರೂ, ಜಿಲ್ಲೆಯ ಎಲ್ಲ ಜನರಿಗೂ ಅರ್ಜಿ ಸಲ್ಲಿಸಲು ಸರಣಿ ಪತ್ರಿಕಾ ಪ್ರಕಟಣೆ ನೀಡಲಾಗುತ್ತದೆ. ಇದನ್ನು ನಂಬಿ ಸಾವಿರಾರು ರೂ. ಖರ್ಚು ಮಾಡಿ ಆಸೆಯಿಂದ ಬಡವರು ಅರ್ಜಿ ಸಲ್ಲಿಸಿದರೂ ಪ್ರಯೋಜನವಿಲ್ಲ. ಇದೆಲ್ಲಾ ತಿಳಿದಿದ್ದರೂ ಅಧಿಕಾರಿಗಳು ಲಭ್ಯ ಬಜೆಟ್ ತಿಳಿಸಿಲ್ಲ, ಅರ್ಜಿ ಆಹ್ವಾನ ಕುರಿತು ಜನಪ್ರತಿನಿಧಿಗಳು ಬಾಯಿಬಿಡಬೇಕಿದೆ.
ಕನಸು ಕಟ್ಟಿಕೊಂಡವರಿಗೆ ನಿರಾಸೆ: ಈ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಸವಿತಾ ಸಮಾಜದ 18 ಲಾನುಭವಿಗಳಿಗೆ 9 ಲಕ್ಷ ರೂ., ಅನುದಾನ ನೀಡಲಾಗಿದೆ, ಮಡಿವಾಳ ಸಮುದಾಯಕ್ಕೆ 245 ಲಾನುಭವಿಗಳ ಆಯ್ಕೆಗೆ 1.28ಕೋಟಿ ರೂ. ಮೀಸಲಿದೆ. ಜಿಲ್ಲೆಯಲ್ಲಿ 4 ಜನರಿಗೆ ಗಂಗಾ ಕಲ್ಯಾಣ ಸೌಲಭ್ಯ ಸಿಗಲಿದೆ. ಬೆಸ್ತ ಸಮುದಾಯ 40 ಲಾನುಭವಿಗಳಿಗೆ 21.91 ಲಕ್ಷ ರೂ. ದೊರೆಯಲಿದ್ದು ಗಂಗಾಕಲ್ಯಾಣ 2 ಮಾತ್ರವಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಉಪ್ಪಾರ ಸಮುದಾಯದ 36 ಜನರಿಗೆ 18.24ಲಕ್ಷ ರೂ.ಮೀಸಲಿದೆ. ವಿಶ್ವಕರ್ಮ ಸಮುದಾಯಕ್ಕೆ 14.20 ಲಕ್ಷ ರೂ. ಇದ್ದು 31 ಲಾನುಭವಿಗಳಿಗಷ್ಟೇ ಸೌಲಭ್ಯ ಸಿಗಲಿದೆ. ಭಾರಿ ಕನಸುಗಳನಿಟ್ಟುಕೊಂಡು ಅರ್ಜಿ ಸಲ್ಲಿಸಿರುವ ಸಾವಿರಾರು ಸಂಖ್ಯೆಯ ಜನರಿಗೆ ತುಂಬಾ ನಿರಾಸೆಯಾಗಲಿದೆ.
ಜಿಲ್ಲೆಯಲ್ಲಿ ಈ ವರ್ಷ ಸವಿತಾ ಸಮಾಜದ 18, ಮಡಿವಾಳ ಸಮುದಾಯದ 245, ಬೆಸ್ತ 40, ಉಪ್ಪಾರ 36 ಹಾಗೂ ವಿಶ್ವಕರ್ಮ ಸಮುದಾಯದ 31 ಜನರಿಗಷ್ಟೇ ವಿವಿಧ ಸೌಲಭ್ಯ ನೀಡಲು ಅನುದಾನ ನೀಡಲಾಗಿದೆ, ದೇವರಾಜ ಅರಸು ನಿಗಮದಿಂದ ಕಾರ್ಯಕ್ರಮದ ಪಟ್ಟಿ ಬಂದಿಲ್ಲ. ಸಿಇಒ ಅಧ್ಯಕ್ಷತೆಯ ಸಮಿತಿ ಲಾನುಭವಿಯ ಆಯ್ಕೆ ನಡೆಸಲಿದೆ. ಭಕ್ತ ಕುಚೇಲ ಎಂಡಿ, ದೇವರಾಜ ಅರಸು ಅಭಿವೃದ್ಧಿ ನಿಗಮ