ವಲಸೆ ಪಡಿತರ ಚೀಟಿದಾರರಿಗೆ ಸಿಗುತ್ತಿಲ್ಲ ಅಕ್ಕಿ

rice
Published on

ಹರೀಶ್ ಮೋಟುಕಾನ, ಮಂಗಳೂರು

ವಲಸೆ ಪಡಿತರ ಚೀಟಿದಾರರಿಗೆ ವಿತರಿಸಲು ಅಕ್ಕಿ, ಗೋಧಿ ಕಳೆದ ನಾಲ್ಕೈದು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಸಮರ್ಪಕವಾಗಿ ಪೂರೈಕೆ ಆಗದೆ, ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಬಂದಿರುವ ಬಡವರು ಪರದಾಡುವಂತಾಗಿದೆ.

‘ವನ್ ನೇಷನ್ ವನ್ ರೇಷನ್ ಕಾರ್ಡ್’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಫಲಾನುಭವಿಗಳು ದೇಶದ ಎಲ್ಲಿ ಬೇಕಾದರೂ ತಮ್ಮ ಪಾಲಿನ ಪಡಿತರ ಸಾಮಗ್ರಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆಯಬಹುದು. ಇದು ವಲಸೆ ಕಾರ್ಮಿಕರಿಗೆ ವರದಾನವಾಗಿದೆ. ಎಲ್ಲ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಜೋಡಿಸಿರುವುದರಿಂದ ಎಲ್ಲಿಯೂ ಅಕ್ರಮಗಳಿಗೆ ಅವಕಾಶವಾಗುವುದಿಲ್ಲ. ನಕಲಿ ಪಡಿತರ ಚೀಟಿಗಳಿಗೆ ಬ್ರೇಕ್ ಹಾಕಲು ಈ ಮೂಲಕ ಸಾಧ್ಯವಾಗಿದೆ.

ಆದರೆ, ಸರ್ಕಾರ ಅದನ್ನು ಸಮರ್ಪಕವಾಗಿ ಪೂರೈಕೆ ಮಾಡುವುದರಲ್ಲಿ ವಿಫಲವಾಗಿರುವುದರಿಂದ ಪ್ರಸ್ತುತ ಲಾಕ್‌ಡೌನ್ ಅವಧಿಯಲ್ಲಿ ಬಡ ಕಾರ್ಮಿಕರು ತೊಂದರೆಗೆ ಸಿಲುಕುವಂತಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ವಿಚಾರಿಸಿದಾಗ ವಲಸೆ ಪಡಿತರ ಚೀಟಿದಾರರಿಗೆ ಸಾಮಗ್ರಿ ಪೂರೈಕೆಯಾಗಿಲ್ಲ. ಈ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಪಡಿತರ ಚೀಟಿದಾರರು ಕೊಂಡೊಯ್ದು ಉಳಿದರೆ ನಿಮಗೆ ನೀಡಲಾಗುವುದು ಎಂಬುದು ಅಲ್ಲಿನ ಸಿಬ್ಬಂದಿ ನೀಡುವ ಉತ್ತರ. ಕೆಲಸಕ್ಕೆ ರಜೆ ಮಾಡಿ ಪಡಿತರ ತರಲು ಹೋದವರು ಬರಿಗೈಲಿ ಬರುವಂತಾಗಿದೆ ಎಂದು ವಲಸೆ ಕಾರ್ಮಿಕರು ದೂರಿದ್ದಾರೆ.

ಸಕಾಲದಲ್ಲಿ ದೊರಕದಿದ್ದರೆ ಸಮಸ್ಯೆ

ಲಾಕ್‌ಡೌನ್ ಘೋಷಣೆಯಾಗಿ ಈ ವರ್ಗಕ್ಕೆ ಕೆಲಸವೂ ಇಲ್ಲ. ಊರಿಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಮುಂದುವರಿಯುವ ಭೀತಿಯೂ ಇರುವುದರಿಂದ ಹೊರ ಜಿಲ್ಲೆಗಳಿಂದ ಬಂದಿರುವ ಕಾರ್ಮಿಕ ಸಮುದಾಯ ಪಡಿತರವನ್ನೇ ನೆಚ್ಚಿಕೊಂಡಿದೆ. ಸುಲಭವಾಗಿ ಸಕಾಲಕ್ಕೆ ದೊರಕದಿದ್ದಾಗ ಸಮಸ್ಯೆ ಎದುರಾಗಲಿದೆ.

ಅಕ್ಕಿ ಕಡಿತದ ಶಾಕ್

ನೂತನ ಪಡಿತರ ವ್ಯವಸ್ಥೆ ಮೂಲಕ ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್‌ದಾರನ ಕುಟುಂಬದ ಪ್ರತೀ ಸದಸ್ಯರಿಗೆ 10 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ಅಥವಾ ಜೋಳ ವಿತರಣೆ ಮಾಡಲಾಗುತ್ತಿತ್ತು. ಪ್ರಸ್ತುತ ಅದನ್ನು 5 ಕೆ.ಜಿಗೆ ಇಳಿಸಲಾಗಿದೆ. ಹೊಸ ಪಡಿತರ ವ್ಯವಸ್ಥೆಯಡಿ ಅಕ್ಕಿಯನ್ನು 5 ಕೆ.ಜಿಯಿಂದ 2 ಕೆ.ಜಿಗೆ ಇಳಿಸಿರುವ ಮಾಹಿತಿಯೂ ಇದೆ. ಸರ್ಕಾರದ ಆರ್ಥಿಕ ಹೊರೆ ತಪ್ಪಿಸಲು ಕೈಗೊಂಡ ನಿರ್ಧಾರದಿಂದ ಬಡವರು ಹಸಿವಿನಿಂದ ಬಳಲುವಂತಾಗಿದೆ.

(((ಕ್ವೋಟ್ಸ್)))

ದ.ಕ.ಜಿಲ್ಲೆಯಲ್ಲಿ ವಲಸೆ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ವಿತರಣೆಯಲ್ಲಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರಿಗಾದರೂ ಸಮಸ್ಯೆಯಾದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಿಲ್ಲಾ ಕಚೇರಿ 0824-2423622ಗೆ ಕರೆ ಮಾಡಬಹುದು. ಅವರಿಗೆ ತಕ್ಷಣ ವ್ಯವಸ್ಥೆ ಮಾಡಲಾಗುವುದು. ಮುಂದಿನ ತಿಂಗಳಿನಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತೀ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿ ವಿತರಣೆ ಮಾಡುವ ಯೋಜನೆ ಜಾರಿಗೆ ಸರ್ಕಾರದಿಂದ ಆದೇಶ ಬರಲಿದೆ.

ರಮ್ಯಾ

ಉಪನಿರ್ದೇಶಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ.

((((((ಕ್ವೋಟ್ಸ್)))))

ಕೊಪ್ಪಳ ಜಿಲ್ಲೆಯಿಂದ ಬಂದು ಮಂಗಳೂರು ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬ ಬಿಪಿಎಲ್ ಪಡಿತರ ಚೀಟಿ ಹೊಂದಿದೆ. ಸೋಮವಾರ ಪದವಿನಂಗಡಿ ನ್ಯಾಯಬೆಲೆ ಅಂಗಡಿಗೆ ಹೋದಾಗ ಅಲ್ಲಿ ವಲಸೆ ಪಡಿತರ ಚೀಟಿದಾರರಿಗೆ ಸಾಮಗ್ರಿ ಬಂದಿಲ್ಲ. ಇಲ್ಲಿನವರಿಗೆ ಕೊಟ್ಟು ಉಳಿದರೆ ಗುರುವಾರದ ನಂತರ ಕೊಡುವುದಾಗಿ ಹೇಳಿದ್ದಾರೆ. ಪಡಿತರ ತರಲೆಂದು ಕೆಲಸಕ್ಕೆ ರಜೆ ಮಾಡಿದೆ. ಮತ್ತೆ ರಜೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹನುಮಂತಪ್ಪ

ಕೂಲಿ ಕಾರ್ಮಿಕ, ಕೊಪ್ಪಳ

ವಲಸೆ ಪಡಿತರ ಚೀಟಿದಾರರಿಗೆ ವಿತರಿಸಲು ಪ್ರತ್ಯೇಕ ಸ್ಟಾಕ್ ಕಳೆದ ಐದು ತಿಂಗಳಿನಿಂದ ವಿತರಣೆ ಮಾಡಿಲ್ಲ. ಈವರೆಗೆ ಇದ್ದುದರಲ್ಲಿಯೇ ಹೊಂದಾಣಿಕೆ ಮಾಡಿ ನೀಡುತ್ತಿದ್ದೇವೆ. ನಮ್ಮ ಅಂಗಡಿ ವ್ಯಾಪ್ತಿಯವರಿಗೆ ವಿತರಣೆ ಆಗಿ ಉಳಿದರೆ ಗುರುವಾರದ ನಂತರ ಕೊಡಲಾಗುವುದು.

ನ್ಯಾಯಬೆಲೆ ಅಂಗಡಿ ಸಿಬ್ಬಂದಿ

ಪದವಿನಂಗಡಿ

ವಲಸೆ ಪಡಿತರ ಚೀಟಿದಾರರಿಗೆ ಸಾಮಗ್ರಿ ವಿತರಣೆಯಲ್ಲಿ ಸಮಸ್ಯೆ ಆಗಿಲ್ಲ. ವಲಸೆ ಕಾರ್ಮಿಕರು ತಮ್ಮ ನಿವಾಸಕ್ಕೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಮಾಹಿತಿ ನೀಡಬೇಕು. ಇದರಿಂದ ಸೊಸೈಟಿಗಳಿಗೆ ಹೆಚ್ಚುವರಿ ಪಡಿತರ ಕಳುಹಿಸಲು ಅನುಕೂಲವಾಗುತ್ತದೆ. ಸ್ವಲ್ಪ ಜನರಿಗೆ ಹೊಂದಿಸಿಕೊಡಬಹುದು. ಹೆಚ್ಚು ಜನರಿಗೆ ರೇಷನ್ ಬೇಕಾದರೆ ಮುಂಚಿತವಾಗಿ ತಿಳಿಸಬೇಕಾಗುತ್ತದೆ.

ಮಹಮ್ಮದ್ ಇಸಾಕ್

ಉಪನಿರ್ದೇಶಕ, ಆಹಾರ ಇಲಾಖೆ, ಉಡುಪಿ

((ಸಾಂದರ್ಭಿಕ ಚಿತ್ರ ಬಳಸಬಹುದು))

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net