

ಮಂಗಳೂರು: ದೇಶಾದ್ಯಂತ ಹೆಚ್ಚುತ್ತಿರುವ ಕೋವಿಡ್‌ನಿಂದಾಗಿ ವಿಮಾನ ಪ್ರಯಾಣಿಕರ ಸಂಖ್ಯೆಯ ಮೇಲೂ ಪರಿಣಾಮ ಉಂಟಾಗಿದೆ. ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಿಂದ ಒಂದು ವಿಮಾನ ಮಾತ್ರ ಹಾರಾಟ ನಡೆಸಿದೆ.
ಸಾಮಾನ್ಯವಾಗಿ ಸಹಜ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ/ದೇಶೀಯ ಸಹಿತ 22ರಷ್ಟು ವಿಮಾನ ಸೇವೆಗಳು ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ವಹಿಸಲ್ಪಡುತ್ತವೆ. ಆದರೆ ಕಳೆದ ಕೆಲ ದಿನಗಳಿಂದ, ಅದರಲ್ಲೂ ಲಾಕ್‌ಡೌನ್ ಘೋಷಣೆ ಬಳಿಕ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ವಿವಿಧ ರಾಜ್ಯಗಳಲ್ಲಿ ವಿಮಾನದೊಳಗೆ ಕಾಲಿಡಬೇಕಾದರೆ ಆರ್‌ಟಿ-ಪಿಸಿಆರ್ ಟೆಸ್ಟ್ ವರದಿ ಕಡ್ಡಾಯ ಮಾಡಲಾಗಿದೆ. ಇನ್ನೊಂದೆಡೆ ವ್ಯಾಪಾರ ಇತ್ಯಾದಿ ಇಲ್ಲದ ಕಾರಣ ಆ ಉದ್ದೇಶಕ್ಕಾಗಿ ಹೋಗುವವರೂ ಇಲ್ಲ. ಹಾಗಾಗಿ ವಿಮಾನಗಳಲ್ಲಿ ಪ್ರಯಾಣಿಕರಿಲ್ಲ. ಕೊಲ್ಲಿ ರಾಷ್ಟ್ರಗಳಿಗೂ ವಿಮಾನಗಳು ಹೋಗುತ್ತಿಲ್ಲ.
ಕಳೆದೊಂದು ವಾರದಿಂದ ದಿನಕ್ಕೆ ಎರಡು-ಮೂರು ವಿಮಾನಗಳು ಬೇರೆ ಬೇರೆ ನಗರಗಳಿಗೆ ಹಾರಾಟ ನಡೆಸುತ್ತಿದ್ದವು. ಆದರೆ ಮಂಗಳವಾರ ಒಂದು ವಿಮಾನ ಮಾತ್ರ ಹಾರಾಟ ನಡೆಸಿದೆ. ಮಂಗಳೂರಿನಿಂದ ಮುಂಬೈಗೆ ಒಂದು ವಿಮಾನ ತೆರಳಿರುವುದು ಬಿಟ್ಟರೆ ಬೇರೆ ಯಾವುದೇ ಸೇವೆ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಸದ್ಯ ಆನ್‌ಲೈನ್ ಬುಕಿಂಗ್‌ನಲ್ಲಿ ಮುಂಬೈ, ಬೆಂಗಳೂರು, ದೆಹಲಿ ಮತ್ತಿತರ ನಗರಗಳಿಗೆ ಒಂದೆರಡು ವಿಮಾನಗಳ ಸಂಚಾರ ಇರುವುದನ್ನು ತೋರಿಸುತ್ತಿದೆಯಾದರೂ, ಪ್ರಯಾಣಿಕರ ಕೊರತೆಯಿಂದ ಇವುಗಳು ಕೊನೇ ಕ್ಷಣದಲ್ಲಿ ರದ್ದುಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಕೋವಿಡ್ ಪ್ರಕರಣಗಳು ಇಳಿಕೆಯ ಹಾದಿಯಲ್ಲಿರುವುದರಿಂದ ಇನ್ನೊಂದು ವಾರದಲ್ಲಿ ವಿಮಾನ ಹಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಗಳಿವೆ.
ಹುಸಿಯಾಯಿತೇ ನಿರೀಕ್ಷೆ?: ಮಂಗಳೂರು ವಿಮಾನ ನಿಲ್ದಾಣ ಅದಾನಿ ಪಾಲಾದ ನಂತರ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನಗಳು ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾದಂತೆ ಕಾಣುತ್ತಿದೆ. ಕಳೆದ ವಾರ ಬಿಡುಗಡೆಯಾದ ದೇಶದ ಜನನಿಬಿಡ ವಿಮಾನ ನಿಲ್ದಾಣಗಳ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮಂಗಳೂರು ಕಳೆದ ವರ್ಷದ 29ನೇ ಸ್ಥಾನದಿಂದ ಈ ಬಾರಿ 31ನೇ ಸ್ಥಾನಕ್ಕೆ ಕುಸಿದಿತ್ತು. ಹಿನ್ನಡೆಗಳಿಗೆ ಕೋವಿಡ್ ಕಾರಣಗಳನ್ನು ನೀಡಲಾಗುತ್ತಿದೆ. ಆದರೆ, ಕೋವಿಡ್ ಹೊರತಾಗಿಯೂ ಕಳೆದ ವರ್ಷವಷ್ಟೇ ಆರಂಭಗೊಂಡಿರುವ ಪಕ್ಕದ ಕಣ್ಣೂರು ವಿಮಾನ ನಿಲ್ದಾಣ ಉತ್ತಮ ನಿರ್ವಹಣೆ ತೋರುತ್ತಿರುವಾಗ ಮಂಗಳೂರು ವಿಮಾನ ನಿಲ್ದಾಣ ಇಂತಹ ಸ್ಥಿತಿಗೆ ತಲುಪಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಟೀಕೆ ವ್ಯಕ್ತವಾಗಿದೆ.