ಆರ್‌ಟಿಸಿಯಿಲ್ಲದೆ ಸಿಗುತ್ತಿಲ್ಲ ಸೌಲಭ್ಯ

konki
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ನಾಡ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ವಿಶೇಷ ಗ್ರಾಮ ಸಭೆ ನಡೆಯಿತು. ಈ ಸಂದರ್ಭ ಕೋಣ್ಕಿ ದರ್ಲೆಗುಡ್ಡೆ ಭಾಗದ ಕೊರಗ ಕಾಲನಿಗೆ ಇರುವ ಕುಡಿಯುವ ನೀರಿನ ಕೊರತೆ ಕುರಿತು ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳನ್ನು ದರ್ಲೆಗುಡ್ಡೆ ನಿವಾಸಿಗಳು ತರಾಟೆಗೆ ತೆಗೆದುಕೊಂಡರು.

ರಾಮನಗರ ತೆಂಕಬೈಲಿನ ನಾಗರತ್ನ ಮಾತನಾಡಿ, ನಾವು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ಒಟ್ಟು 10 ಕುಟುಂಬಗಳಿದ್ದು, ಯಾರಿಗೂ ಇನ್ನೂ ಜಾಗದ ಆರ್‌ಟಿಸಿ ಮಾಡಿಕೊಟ್ಟಿಲ್ಲ. ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರಿಗೂ ಮನವಿ ಕೊಟ್ಟಾಯಿತು. ಇನ್ನೂ ಅದೆಷ್ಟು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕು? ಇದರಿಂದಾಗಿ ನಮ್ಮ ನಿತ್ಯ ಕಾರ್ಯಗಳೂ ವಿಳಂಬವಾಗುತ್ತಿವೆ. ಕನಿಷ್ಠ ಮನೆ ಕಟ್ಟಿರುವ ಜಾಗದ 5 ಸೆಂಟ್ಸ್ ಆದರೂ ದಾಖಲೆ ಮಾಡಿಕೊಡಿ. ಆರ್‌ಟಿಸಿಯಿಲ್ಲದೆ ಯಾವುದೇ ಸರ್ಕಾರಿ ಸವಲತ್ತು ಪಡೆಯಲು ಆಗುತ್ತಿಲ್ಲ. ಮನೆ ದುರಸ್ತಿಗೂ ಸಾಲ ಪಡೆಯಲಾಗದ ಪರಿಸ್ಥಿತಿಯಿದೆ. ನಮ್ಮ ಕುಟುಂಬದ ಭವಿಷ್ಯಕ್ಕಾದರೂ ಜಾಗದ ಹಕ್ಕುಪತ್ರ ಸಿಗುವಂತಾಗಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದರ್ಲೆಗುಡ್ಡೆ ನಿವಾಸಿಗರು ದನಿಗೂಡಿಸಿದರು.

ನಾಡ ಗ್ರಾಮದಲ್ಲಿ ಸಾಕಷ್ಟು ಜಾಗ ಅಕ್ರಮ ಒತ್ತುವರಿಯಾಗಿದೆ. ಇಂತಹ ಜಾಗಗಳನ್ನು ಗುರುತಿಸಿ, ಅಗತ್ಯ ಇರುವವರಿಗೆ ನೀಡಬೇಕು ಎಂದು ಸುಶೀಲಾ ಒತ್ತಾಯಿಸಿದರು. ಜತೆಗೆ ಅರ್ಜಿ ವಿಲೇಯಲ್ಲಿ ವಿಎ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಡ ಗ್ರಾ.ಪಂ.ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಮತಾ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಪೃಥ್ವಿಶ್ ಶೆಟ್ಟಿ, ಗ್ರಾಪಂ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು, ಪರಿಶಿಷ್ಟ ಜಾತಿ, ಪಂಗಡದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಹರೀಶ್ ಪ್ರಸ್ತಾವಿಸಿದರು. ಸಿಬಂದಿ ಮಾಧವ ಸ್ವಾಗತಿಸಿದರು.

ಎಸಿ ಸೂಚನೆಗೂ ಉಡಾಫೆ

ಶ್ರೀಧರ್ ನಾಡ ಮಾತನಾಡಿ, ನಾಡ ಗ್ರಾಮದ ಕೊರಗರಿಗೆ ಜಾಗ ಸಹಿತ ಅಗತ್ಯ ಸೌಕರ್ಯ ಒದಗಿಸುವ ಸಲುವಾಗಿ ಎಸಿಯವರ ಸಭೆಯಲ್ಲಿ ಜಂಟಿ ಸರ್ವೇಗೆ ಸೂಚಿಸಿದ್ದರು. ಅವರ ಸ್ಥಿತಿಗತಿ ಅಧ್ಯಯನ ಸಲುವಾಗಿ ಪ್ರತಿ ಮನೆಗೂ ಭೇಟಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಎಸಿ ಅವರ ಸೂಚನೆಗಳನ್ನೂ ಉಡಾಫೆ ಮಾಡಲಾಗಿದೆ ಎಂದು ಆರೋಪಿಸಿದರು. ನಾಡ ವಿಎ ಸಂದೀಪ್ ಪ್ರತಿಕ್ರಿಯಿಸಿ, ಸರ್ವೇ ಕಾರ‌್ಯ ಬಹುತೇಕ ಆಗಿದೆ. ಆದರೆ ಅಂತಿಮಗೊಂಡಿಲ್ಲ. ಅದಾದ ಬಳಿಕ ಪೂರ್ಣ ಚಿತ್ರಣ ಸಿಗಲಿದೆ ಎಂದರು.

ಅಧಿಕಾರಿಗಳಿಂದ ಮಾಹಿತಿ

ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ನರೇಗಾ ಕುರಿತು ಸಂಯೋಜಕ ಶ್ರೀಹರಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net