

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕೆ ಹಗಲಿರುಳು ಕರ್ತವ್ಯ ನಿರ್ವಹಿಸುವ ಮಲೇರಿಯಾ ವಾರಿಯರ್ಸ್‌ಗಳ ಜೀವನಕ್ಕೆ ಅಭದ್ರತೆ ಕಾಡುತ್ತಿದೆ. 10 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಮಾಸಿಕ 12 ಸಾವಿರ ರೂ. ಮಾತ್ರ ವೇತನ ಲಭಿಸುತ್ತಿದ್ದು, ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.
ಹಲವು ವರ್ಷಗಳಿಂದ ಜಿಲ್ಲೆಯಲ್ಲಿರುವ ಸೊಳ್ಳೆ ಉತ್ಪತ್ತಿ ಸ್ಥಳಗಳನ್ನು ಪತ್ತೆ ಹಚ್ಚಿ ಜನರ ಆರೋಗ್ಯ ಕಾಪಾಡುವ ಈ ವಾರಿಯರ್ಸ್‌ಗಳು ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಇಎಸ್‌ಐ ಸೇರಿದಂತೆ ಆರೋಗ್ಯ ವಿಮೆಯ ಸೌಕರ್ಯವೂ ಇವರಿಗೆ ಲಭ್ಯವಿಲ್ಲ. ಸರ್ಕಾರಿ ರಜೆ ಇದ್ದರೂ ಇವರು ಕರ್ತವ್ಯ ಮಾಡುತ್ತಾರೆ. ಮಲೇರಿಯಾ ಸಹಾಯವಾಣಿ ಕೇಂದ್ರಕ್ಕೆ ದೂರು ಬಂದರೆ 24*7 ಕಾರ್ಯಾಚರಣೆ ಮಾಡುತ್ತಾರೆ. ವಲಸೆ ಕಾರ್ಮಿಕರು, ಕಾಲನಿಗಳ ಜನರಿಗಿರುವ ಮಲೇರಿಯಾ ರೋಗ ಪತ್ತೆ ಪರೀಕ್ಷೆ ಸೇರಿದಂತೆ ನಿರಂತರ ಕರ್ತವ್ಯದಲ್ಲಿರುತ್ತಾರೆ. ಸ್ವಯಂಸೇವಕರಾದ ಇವರು ಸರ್ಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಆದರೆ, ಇವರಿಗೆ ವೇತನ ನೀಡುವವರು ಹೊರಗುತ್ತಿಗೆ ಸಂಸ್ಥೆಯವರು.
ನಿತ್ಯದ ಕಾಯಕ: ಸೊಳ್ಳೆಯಿಂದ ಹರಡುವ ರೋಗ ನಿಯಂತ್ರಿಸುವ ಸೇವಾ ಸಂಸ್ಥೆ (ಡಿಎಂಒ)ಆರೋಗ್ಯ ಇಲಾಖೆಯ ಅಧೀನದಲ್ಲಿ ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿರ್ಮಾಣ ಹಂತದ ವಸತಿ ಹಾಗೂ ವಸತಿಯೇತರ ಕಟ್ಟಡದ ಪರಿಶೀಲನೆ, ಮಲೇರಿಯಾ ರೋಗ ಪತ್ತೆಯಾದ ಸ್ಥಳದಲ್ಲಿ ತುರ್ತು ಕಾರ್ಯಾಚರಣೆ, ರ‌್ಯಾಪಿಡ್ ಡೈಯೋಗ್ನೋಸ್ಟಿಕ್ ಕಿಟ್ ಮೂಲಕ ಕಾರ್ಮಿಕರ ರೋಗ ಪರೀಕ್ಷೆ, ಮನೆ ಮನೆ ಭೇಟಿ ನೀಡಿ ಲಾರ್ವಾ ಬ್ರೀಡಿಂಗ್ ತಡೆಗಟ್ಟುವುದು ಇವರ ನಿತ್ಯದ ಕಾಯಕವಾಗಿದೆ.
40ಕ್ಕೂ ಅಧಿಕ ಸಿಬ್ಬಂದಿ: ಜಿಲ್ಲಾ ಮಲೇರಿಯಾ ನಿಯಂತ್ರಣ ತಂಡವು ಸೈಟ್ ವಿಸಿಟರ್, ಡೊಮೆಸ್ಟಿಕ್ ಟೀಮ್, ಕಾಂಪ್ರೆಸಿವ್ ಮಲೇರಿಯಾ ಎಲಿಮಿನೇಷನ್ ಟೀಮ್(ಸಿಎಂಇಟಿ), 24*7 ತಂಡ ಒಳಗೊಂಡಿದೆ. ಸರ್ಕಾರಿ ರಜೆ ಸಹಿತ ಪ್ರತಿದಿನ (ಭಾನುವಾರ ಹೊರತುಪಡಿಸಿ) ಸೊಳ್ಳೆ ನಿಯಂತ್ರಣ, ಸೊಳ್ಳೆಯಿಂದ ಹರಡುವ ರೋಗ ಪತ್ತೆ ಕಾರ್ಯ ನಿರ್ವಹಿಸುವುದು ಈ ತಂಡದ ಜವಾಬ್ದಾರಿ. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ (ಡಿಎಂಒ), ಪ್ರಯೋಗಾಲಯ ತಂತ್ರಜ್ಞ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 40ಕ್ಕೂ ಅಧಿಕ ಸಿಬ್ಬಂದಿ ಈ ತಂಡದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಇಲಾಖೆಯೊಂದಿಗೆ ಏಜೆನ್ಸಿ ಒಪ್ಪಂದ: ನಗರಾಡಳಿತ ಇಲಾಖೆಯು ನೌಕರರನ್ನು ನಿಯೋಜಿಸುವಾಗ ಅವರಿಗೆ ಇಎಸ್‌ಐ, ಪಿಎ್ ಸೇರಿದಂತೆ ಇನ್ನಿತರ ಸೌಲಭ್ಯ ನೀಡುವಂತೆ ಗುತ್ತಿಗೆ ಸಂಸ್ಥೆಗೆ ಷರತ್ತು ವಿಧಿಸಿ ಒಪ್ಪಂದ ಮಾಡಿಕೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆ, ಪುತ್ತೂರು ನಗರ ಪಾಲಿಕೆ, ಇತರ ಪುರಸಭೆ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಮಲ್ಟಿ ಪರ್ಪಸ್ ವರ್ಕರ್ಸ್ (ಎಂಪಿಡಬ್ಲುೃ) ಹೊರಗುತ್ತಿಗೆ ಸಿಬ್ಬಂದಿಗಳಿದ್ದು, ಅವರಿಗೆ ಎಎಸ್‌ಐ, ಪಿಎ್ ಸೇರಿದಂತೆ ಇನ್ನಿತರ ಸೌಲಭ್ಯ ಇದೆ. ಆದರೆ, ಜಿಲ್ಲಾ ಮಲೇರಿಯಾ ನಿಯಂತ್ರಣ ವಿಭಾಗಕ್ಕೆ ಸ್ವಯಂ ಸೇವಕರನ್ನು ನೇರವಾಗಿ ನೇಮಿಸುವ ಬದಲು ಹೊರಗುತ್ತಿಗೆ ಸಂಸ್ಥೆಯಿಂದ ಪಡೆಯಲಾಗಿದೆ. ಗುತ್ತಿಗೆ ಸಂಸ್ಥೆಯಾದ ಮೈಸೂರಿನ ವಿಎಸ್‌ಪಿ ಏಜೆಸ್ಸಿ ಸಂಸ್ಥೆ ಜತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಹೆಲ್ತ್ ಇನ್ಸ್‌ಪೆಕ್ಟರ್‌ಗಳ ಶಾಮೀಲಾತಿಯಿಂದ ಷರತ್ತು ಕೈಬಿಟ್ಟು ಒಪ್ಪಂದ ಮಾಡಿಕೊಂಡಿದ್ದರಿಂದ ನಮಗೆ ಯಾವುದೇ ಸವಲತ್ತು ಇಲ್ಲ ಎಂದು ವಾರಿಯರ್ಸ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಹೊರಗುತ್ತಿಗೆ ನೌಕಕರಿಗೆ ನಿಗದಿತ ವೇತನ ಸಹಿತ ಇಎಸ್‌ಐ, ಪಿಎ್ ಸೇರಿದಂತೆ ಅಗತ್ಯ ಸೌಲಭ್ಯವನ್ನು ಆಯಾ ಗುತ್ತಿಗೆ ಸಂಸ್ಥೆಯವರೇ ಒದಗಿಸಬೇಕೆಂಬ ಸರ್ಕಾರಿ ಸುತ್ತೋಲೆಯೇ ಇದೆ. ಈ ಬಗ್ಗೆ ಕಾರ್ಮಿಕ ಇಲಾಖೆ ನಿರಂತರ ಕಣ್ಗಾವಲಿರುವಂತೆಯೂ ಸೂಚನೆ ಇದೆ. ಹೀಗಾಗಿ ಈ ಹಿಂದಿನ ಒಪ್ಪಂದದಂತೆ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಸಿಬ್ಬಂದಿ ನಿಯೋಜಿಸುವಾಗ ಇಎಸ್‌ಐ, ಪಿಎ್ ಸೇರಿದಂತೆ ಇನ್ನಿತರ ಸೌಲಭ್ಯ ಇಲ್ಲದಿದ್ದರೆ ಈ ಒಪ್ಪಂದ ರದ್ದುಗೊಳಿಸಿ ಹೊಸ ಒಪ್ಪಂದದ ಮೂಲಕ ಸೌಲಭ್ಯ ಕಲ್ಪಿಸಲು ಕಾರ್ಮಿಕ ಇಲಾಖೆಗೆ ಅವಕಾಶ ಇದೆ. ಈ ಬಗ್ಗೆ ಮಲೇರಿಯಾ ವಾರಿಯರ್ಸ್ ಕಾರ್ಮಿಕ ಇಲಾಖೆಗೆ ಲಿಖಿತ ದೂರು ನೀಡಿದರೆ ಏಜೆಸ್ಸಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ‘ವಿಜಯವಾಣಿ’ಗೆ ಕಾರ್ಮಿಕ ಅಧಿಕಾರಿ ವಿಲ್ಮಾ ತಿಳಿಸಿದ್ದಾರೆ.
ಸರ್ಕಾರಿ ನಿಯಮದ ಪ್ರಕಾರ ಅವರನ್ನು ಸ್ವಯಂಸೇವಕರು ಎಂದು ನಿಯೋಜಿಸಲಾಗಿದೆ. ಇಎಸ್‌ಐ, ಪಿಎ್ ಸೇರಿದಂತೆ ಇನ್ನಿತರ ಸೌಲಭ್ಯ ನೀಡಬೇಕಾದರೆ ಅವರ ಗೌರವಧನ ಕಡಿತವಾಗಲಿದೆ. ಈ ಬಗ್ಗೆ ಸ್ವಯಂಸೇವಕರಿಗೆ ಮನವರಿಕೆ ಮಾಡಲಾಗಿದೆ.- ಡಾ.ನವೀನ್‌ಚಂದ್ರ ಕುಲಾಲ್ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ