ಡಿ-ಡಿಮ್ಮರ್ ಪರೀಕ್ಷೆ ಮಾಡಲು ಯಂತ್ರವೇ ಇಲ್ಲ; ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದೆ ರೋಗಿಗಳಿಗೆ ತಪ್ಪದ ಪರದಾಟ

D dmmmer
Published on

| ಸದೇಶ್ ಕಾರ್ಮಾಡ್ ಮೈಸೂರು

ಕೋವಿಡ್​ನಿಂದ ಗುಣಮುಖರಾದ ಬಳಿಕವೂ ಚಿಕಿತ್ಸೆಯ ಅಡ್ಡಪರಿಣಾಮದಿಂದಾಗಿ ರಕ್ತ ಹೆಪು್ಪಗಟ್ಟುವ ಸಮಸ್ಯೆ, ಹೃದಯಾಘಾತದಿಂದ ರೋಗಿಗಳು ಸಾವನ್ನಪು್ಪತ್ತಿರುವ ಪ್ರಕರಣ ರಾಜ್ಯದಲ್ಲಿ ಹೆಚ್ಚುತ್ತಿದೆ. ಆದರೆ ಕರೊನಾ ಬಳಿಕದ ಪರಿಣಾಮ ಅರಿಯಲು ಡಿ-ಡಿಮ್ಮರ್ ಪರೀಕ್ಷೆ ಅವಶ್ಯಕತೆಯಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪರೀಕ್ಷಾ ಯಂತ್ರವೇ ಇಲ್ಲ. ಮೈಸೂರು ಸೇರಿದಂತೆ ಬಹುತೇಕ ಜಿಲ್ಲೆಗಳದ್ದು ಇದೇ ಸ್ಥಿತಿ.

ಕೋವಿಡ್ ಚಿಕಿತ್ಸೆ ಹಂತದಲ್ಲಿ ಯಾವಾಗ ಬೇಕಾದರೂ ರಕ್ತ ಹೆಪ್ಪುಗಟ್ಟಬಹುದು. ಮಿದುಳಿನಲ್ಲಿ ಹೆಪ್ಪುಗಟ್ಟಿದರೆ ಪಾರ್ಶ್ವವಾಯು, ಹೃದಯದ ಬಳಿ ಹೆಪ್ಪುಗಟ್ಟಿದರೆ ಹೃದಯಾಘಾತವಾಗುತ್ತದೆ. ಈ ಸಮಸ್ಯೆ ಅರಿಯಲು ಚಿಕಿತ್ಸೆ ಹಂತದಲ್ಲೇ ಪರೀಕ್ಷೆ ನಡೆಸಬೇಕು. ಆದರೆ ಖಾಸಗಿ ಆಸ್ಪತ್ರೆಗಳ ಹೊರತಾಗಿ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ವ್ಯವಸ್ಥೆ ಇಲ್ಲ. ಪರಿಣಾಮ ಕೋವಿಡ್​ನಿಂದ ಗುಣಮುಖರಾದ ರೋಗಿಗಳೂ ಸಾಯುವ ಅಪಾಯ ಹೆಚ್ಚಿದೆ.

ರಕ್ತ ಹೆಪ್ಪುಗಟ್ಟುವುದನ್ನು ಮೊದಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಡಿ-ಡಿಮ್ಮರ್ ಪರೀಕ್ಷೆ ಅವಶ್ಯಕತೆಯಿದ್ದು, ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಈ ಪರೀಕ್ಷಾ ಕೇಂದ್ರಗಳು ಅಸ್ತಿತ್ವದಲ್ಲಿವೆ. ಹೋಂ ಐಸೋಲೇಷನ್​ನಲ್ಲಿರುವ ಹಲವು ಸೋಂಕಿತರಿಗೆ ಈ ರೀತಿಯ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ಬಗ್ಗೆ ಮಾಹಿತಿಯೇ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಡಿ-ಡಿಮ್ಮರ್ ಪರೀಕ್ಷೆಯನ್ನು 900-1000 ರೂ.ಗೆ ಮಾಡಿಸಿಕೊಳ್ಳಬಹುದು.

ವೈದ್ಯರು ಹೇಳೋದೇನು?

ಕೆಲವು ಕೋವಿಡ್ ಪೀಡಿತರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ರಕ್ತ ಹೆಪ್ಪುಗಟ್ಟದೆ ಇರಲು ಇಂಜೆಕ್ಷನ್ ಹಾಗೂ ಔಷಧ ನೀಡಲಾಗುತ್ತಿದೆ. ರಕ್ತ ಹೆಪ್ಪುಗಟ್ಟುವುದನ್ನು ಪತ್ತೆ ಹಚ್ಚಲು ಡಿ-ಡಿಮ್ಮರ್ ಪರೀಕ್ಷೆ ಮಾಡಿಸುವುದು ಉತ್ತಮ. ಆದರೆ, ನಮ್ಮಲ್ಲಿ ಅಂಥ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಂಪ್ಲೀಟ್ ಬ್ಲಡ್ ಕೌಂಟ್ (ಸಿಬಿಸಿ) ಪರೀಕ್ಷೆ ನಡೆಸಲಾಗುತ್ತಿದೆ. ಸಿಬಿಸಿ ಪರೀಕ್ಷೆಯಿಂದಲೂ ರಕ್ತ ಹೆಪ್ಪುಗಟ್ಟುವ ಮಾಹಿತಿ ತಿಳಿದುಕೊಂಡು ಚಿಕಿತ್ಸೆ ನೀಡಲು ಸಾಧ್ಯವಿದೆ. ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬಿಸಿ ಪರೀಕ್ಷೆ ನಡೆಸಲಾಗುತ್ತಿದೆ. ತೀರಾ ಅವಶ್ಯಕತೆ ಇದ್ದರೆ ಜಯದೇವ ಆಸ್ಪತ್ರೆಯಲ್ಲಿ ಡಿ-ಡಿಮ್ಮರ್ ಪರೀಕ್ಷೆ ಮಾಡಿಸಲಾಗುತ್ತಿದೆ ಎನ್ನುತ್ತಾರೆ ಕೆ.ಆರ್.ಆಸ್ಪತ್ರೆಯ ಆರ್​ಎಂಒ ಡಾ.ರಾಜೇಶ್.

ಪ್ರಯೋಜನವೇನು?

  • ಡಿ-ಡಿಮ್ಮರ್ ಯಂತ್ರ ಕೋವಿಡ್​ನಿಂದ ಗುಣಮುಖರಾದ ಬಳಿಕವೂ ರಕ್ತ ಹೆಪು್ಪ ಗಟ್ಟುವುದನ್ನು ಮೊದಲೇ ಪತ್ತೆ ಹಚ್ಚಬಲ್ಲದು
  • ಮಿದುಳು ಹೆಪ್ಪುಗಟ್ಟಿದಲ್ಲಿ ಪಾರ್ಶ್ವ ವಾಯು, ಹೃದಯದ ಬಳಿ ರಕ್ತ ಹೆಪು್ಪಗಟ್ಟಿದರೆ ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ.

ರಾಜ್ಯದಲ್ಲಿ ಪರಿಸ್ಥಿತಿ ಏನಿದೆ?

  • ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ-ಡಿಮ್ಮರ್ ಯಂತ್ರದ ಸೌಲಭ್ಯವಿಲ್ಲ
  • ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಡಲು ಶಿಫಾರಸು ಮಾಡುತ್ತಾರೆ
  • ಸರ್ಕಾರಿ ಆಸ್ಪತ್ರೆಗಳಲ್ಲೇ ಈ ಸೇವೆ ಸಿಗು ವಂತಾದರೆ ಸಾವಿನ ಪ್ರಮಾಣ ತಗ್ಗಿಸಬಹುದು.

ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಪಾಸಣೆ ನಡೆಸಲು ಪರೀಕ್ಷಾ ಕೇಂದ್ರ ಇಲ್ಲ. ಈ ಉಪಕರಣಕ್ಕೆ 20 ಲಕ್ಷ ರೂ. ವೆಚ್ಚವಾಗಲಿದ್ದು, ಶೀಘ್ರದಲ್ಲಿಯೇ ನಗರದ ಟ್ರಾಮಾ ಸೆಂಟರ್​ಗೆ ಸಿಎಸ್​ಆರ್ ನಿಧಿ ಅಥವಾ ಬೇರೆ ಮೂಲಗಳಿಂದ ಡಿ-ಡಿಮ್ಮರ್ ಯಂತ್ರ ಖರೀದಿಸಿ ನೀಡಲಾಗುವುದು. ಸಿಎಸ್​ಆರ್ ನಿಧಿಯಡಿ ಈ ಉಪಕರಣ ಖರೀದಿಗೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು.

| ಶಿಲ್ಪಾನಾಗ್ ನಗರಪಾಲಿಕೆ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net