

ಮೈಸೂರು: ಕರೊನಾ ನೆಪದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಪ್ರತಿ ವರ್ಷದಂತೆ ಉತ್ಸವ ನಡೆಯಲಿ. ಆದರೆ, ಸಾಂಸ್ಕೃತಿಕ ದಸರಾ ಇರಲಿ, ಮನರಂಜನಾ ದಸರಾ ಬೇಡ!
‘ವಿಜಯವಾಣಿ’ ಸಂವಾದದಲ್ಲಿ ವ್ಯಕ್ತವಾದ ಒಕ್ಕೊರಲ ಅಭಿಮತವಿದು. ‘ವಿಜಯವಾಣಿ’ಯ ಮೈಸೂರು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ನವ ಜೀವನದತ್ತ’- ಕರೊನಾ ಭಯ ಬಿಡಿ ಸಂವಾದ ಕಾರ್ಯಕ್ರಮದಲ್ಲಿ ಕರೊನಾ
ನಟ, ರಂಗಕರ್ವಿು ಮಂಡ್ಯ ರಮೇಶ್ ಮಾತನಾಡಿ, ಕರೊನಾ ಭಯದಿಂದ ಮುದುಡಿರುವ ಮೈಮನಸ್ಸುಗಳು ಅರಳಲು ನಾಡಹಬ್ಬ ದಸರೆ ಆಚರಿಸಬೇಕು. ದಸರಾ ಸರಳವಾಗಲಿ, ಕಲೆ ಮತ್ತು ಸಾಂಸ್ಕೃತಿಕ ದಸರೆಯಾಗಿ ಹೊರಹೊಮ್ಮಲಿ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಲಕ್ಷಾಂತರ ರೂ. ಖರ್ಚು ಮಾಡುವ ಯುವ ದಸರಾ ಕೈಬಿಡಿ. ಅಲ್ಲಿ ಬರೀ ಮೋಜು ಮಸ್ತಿಗೆ ಅವಕಾಶ. ಅನ್ಯ ರಾಜ್ಯದಿಂದ ಕಲಾವಿದರನ್ನು ಕರೆಸಿ ಕುಣಿಸುವುದು ಬೇಡ. ರಸ್ತೆ ಕಾಮಗಾರಿ, ದುರಸ್ತಿ ಕೆಲಸವನ್ನೂ ಮಾಡಬೇಡಿ. ಬರೀ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಾಡಹಬ್ಬ ಆಯೋಜಿಸಬೇಕು. ಇದರಿಂದ ಕಲಾವಿದರು ಸೇರಿ ಎಲ್ಲ ಕ್ಷೇತ್ರಗಳಿಗೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು. ಮೈಸೂರು ಯೋಗ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಮಾತನಾಡಿ, ಪ್ರವಾಹ, ಬರಗಾಲ, ಆರ್ಥಿಕ ಸಂಕಷ್ಟ ಇನ್ನಿತರ ಕಾರಣಕ್ಕೆ ದಸರಾ ಆಯೋಜಿಸಬಾರದು ಎಂಬ ಕೂಗು ಆಗೊಮ್ಮೆ-ಈಗೊಮ್ಮೆ ಕೇಳಿಬರುತ್ತದೆ. ಇದಕ್ಕೆ ಹೊಸ ಸೇರ್ಪಡೆ ಕರೊನಾ. ಈ ರೀತಿಯ ಸಮಸ್ಯೆ ಬಂದಾಗ ಆಚರಣೆ ಕೈಬಿಟ್ಟರೆ ನಾಡಹಬ್ಬ ದುರ್ಬಲವಾಗಲಿದೆ. ಎಂತಹ ಕಷ್ಟ ಬಂದರೂ ಹಬ್ಬವನ್ನು ಕಡ್ಡಾಯವಾಗಿ ಆಯೋಜಿಸಬೇಕು ಎಂದು ಆಗ್ರಹಿಸಿದರು.
ಕರೊನಾ ಸಂಕಷ್ಟದಿಂದ ಹೊರಬರಲು ದಸರಾ ಒಂದು ಟಾನಿಕ್. ಇನ್ನೂ 2 ತಿಂಗಳು ಸಮಯವಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಯೋಜನೆ ರೂಪಿಸಿ ಕಾರ್ಯಗತ ಗೊಳಿಸಬೇಕು. ದಸರೆಯಿಂದ ಮೈಸೂರು ಮತ್ತು ಇಲ್ಲಿಯ ಎಲ್ಲ ಕ್ಷೇತ್ರಗಳು ಸಹಜ ಸ್ಥಿತಿಗೆ ಮರಳಲು ಅನುಕೂಲವಾಗಲಿದೆ. ಈ ಸುವರ್ಣ ಅವಕಾಶವನ್ನು ಕೈಬಿಟ್ಟರೆ, ಇನ್ನು 7-8 ತಿಂಗಳು ಏನು ಮಾಡಲು ಆಗಲ್ಲ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಮೈಸೂರು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ಕುಮಾರ್ ಜೈನ್ ಸಹಮತ ಸೂಚಿಸಿ, ಮೈಸೂರು ದಸರೆ ಉದ್ಯಮ ದಸರೆಯಾಗಿಯೂ ರೂಪಾಂತರವಾಗಲಿ. ಈ ಅವಕಾಶ ಬಳಸಿಕೊಂಡು ‘ಕೈಗಾರಿಕಾ ಪ್ರವಾಸೋದ್ಯಮ’ಕ್ಕೆ ಉತ್ತೇಜನ ನೀಡಬೇಕಿದೆ. ಜಿಲ್ಲೆಯಲ್ಲಿ ವೈವಿಧ್ಯಮಯ ಕೈಗಾರಿಕೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ವೇದಿಕೆ ಕಲ್ಪಿಸಿಕೊಡುವ ಹೊಸ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದರು. ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್ಗೌಡ, ದಸರೆಗೆ ಸಾಂಸ್ಕೃತಿಕ ಸ್ಪರ್ಶ ಇರಲಿ. ಆದರೆ, ಮನರಂಜನೆ ಬೇಡ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.
ಹಳೇ ತಪ್ಪು ಸರಿಪಡಿಸುವ ಕಾಲವಾಗಿ ರೂಪುಗೊಳ್ಳಲಿ
ಕರೊನಾ ಊಹಿಸಲಾಗದಷ್ಟು ಪರಿಣಾಮ ಬೀರಿದೆ. ಬಹಳಷ್ಟು ಕ್ಷೇತ್ರಗಳ ನಷ್ಟಕ್ಕೂ ಕಾರಣವಾಗಿದೆ. ಆದರೆ, ಕೋವಿಡ್-19 ಕಾಲವನ್ನು ಪಾಸಿಟಿವ್ ಆಗಿ ಸ್ವೀಕರಿಸಬೇಕಾಗಿದೆ. ಕರೊನಾ ಕಾಲಮಾನವು ಹಳೇ ತಪ್ಪುಗಳನ್ನು ಸರಿಪಡಿಸುವ ಕಾಲವಾಗಿ ಪರಿವರ್ತನೆಯಾಗಲಿ ಎಂಬ ಸಕಾರಾತ್ಮಕ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು. ಕರೊನಾ ಕಾಲಿಟ್ಟ ವೇಳೆ ಅದನ್ನು ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಡವಿದವು. ಅದು ಉಂಟು ಮಾಡುವ ದುಷ್ಪರಿಣಾಮಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡುವಲ್ಲಿ ಮತ್ತು ಅದನ್ನು ಎದುರಿಸುವಲ್ಲಿ ಸೋತಿವೆ. ಏಕಾಏಕಿ ಲಾಕ್ಡೌನ್ ಜಾರಿ ಮಾಡಿದ್ದರಿಂದ ದೊಡ್ಡ ನಷ್ಟ ಉಂಟಾಯಿತು. ಕರೊನಾ ವಿರುದ್ಧ ರಕ್ಷಣೆಗಿಂತ ಭಯ ಹೆಚ್ಚು ವ್ಯಾಪಿಸಿತು. ಆದರೆ, ಈ ಮಟ್ಟಿಗೆ ಆತಂಕಗೊಳ್ಳುವ ಅಗತ್ಯ ಇರಲಿಲ್ಲ. ಈ ಎಲ್ಲ ನ್ಯೂನತೆ ಸರಿಪಡಿಸಿಕೊಳ್ಳುವ ಕಾಲ ಇದಾಗಬೇಕು. ಕೋವಿಡ್ನ ಭಯ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು, ಹೊಸ ಸ್ವರೂಪದ ವ್ಯಾಪಾರ, ವಹಿವಾಟು ನಡೆಸಲು ಯೋಜನೆ ರೂಪಿಸಿಕೊಳ್ಳಬೇಕಿದೆ ಎಂದು ಶ್ರೀಹರಿ ಹೇಳಿದರು.