

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯಕ ಇಂಜಿನಿಯರ್ (ಎಇ) ಹಾಗೂ ಕಿರಿಯ ಇಂಜಿನಿಯರ್(ಜೆಇ) ಅರ್ಧಕ್ಕರ್ಧ ಹುದ್ದೆಗಳು ಖಾಲಿ ಇವೆ. ಮಂಜೂರಾದ 21 ಎಇ ಮತ್ತು ಜೆಇ ಹುದ್ದೆಗಳಲ್ಲಿ 11 ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು ಖಾಲಿಯಾಗಿವೆ. ಇದರ ಪರಿಣಾಮ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಲ್ಲಿ ಭಾರಿ ಹಿನ್ನಡೆ ಉಂಟಾಗುತ್ತಿದೆ.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ರಸ್ತೆ, ಕಟ್ಟಡ, ಚರಂಡಿ, ಒಳಚರಂಡಿ, ಫುಟ್‌ಪಾತ್, ಮತ್ತಿತರ ಪ್ರಮುಖ ಕಾಮಗಾರಿಗಳ ಹೊಣೆ ಹೊತ್ತುಕೊಳ್ಳುವ ಸಹಾಯಕ ಮತ್ತು ಕಿರಿಯ ಇಂಜಿನಿಯರ್‌ಗಳ ಬಹುತೇಕ ಹುದ್ದೆಗಳು ಖಾಲಿ ಇರುವ ಕಾರಣ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದ್ದ ಅಧಿಕಾರಿಗಳಿಗೆ ಎರಡು, ಮೂರು ಕಡೆಗಳಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಬೇಕಾದ ಅನಿವಾರ್ಯತೆ ಪೌರಾಡಳಿತ ಇಲಾಖೆಗೆ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 10 ನಗರ ಸ್ಥಳೀಯ ಸಂಸ್ಥೆಗಳಿವೆ. ಹಾವೇರಿ ನಗರಸಭೆಗೆ ಒಂದು ಎಇ, ಮೂರು ಜೆಇ ಹುದ್ದೆ ಮಂಜೂರಾಗಿದ್ದು, ಎರಡು ಜೆಇ ಹುದ್ದೆಗಳು ಖಾಲಿ ಇವೆ. ರಾಣೆಬೆನ್ನೂರ ನಗರಸಭೆಯಲ್ಲಿ ಒಂದು ಎಇ, ಮೂರು ಜೆಇ ಹುದ್ದೆಗಳು ಮಂಜೂರಾಗಿದ್ದು, ಒಂದು ಎಇ ಹುದ್ದೆ ಖಾಲಿ ಇದೆ. ಹಾನಗಲ್ಲ, ಸವಣೂರ, ಬಂಕಾಪುರ, ಗುತ್ತಲ, ರಟ್ಟಿಹಳ್ಳಿಯಲ್ಲಿ ಒಂದು, ಎರಡು ಹುದ್ದೆಗಳು ಖಾಲಿ ಇವೆ. ಇನ್ನಾದರೂ ಪೌರಾಡಳಿತ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಈ ಕೂಡಲೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹಾನಗಲ್ಲ ಪುರಸಭೆ, ಬಂಕಾಪುರ ಪುರಸಭೆ, ರಟ್ಟಿಹಳ್ಳಿ ಹಾಗೂ ಗುತ್ತಲ ಪಟ್ಟಣ ಪಂಚಾಯಿತಿಗಳಲ್ಲಿ ಇಂಜಿನಿಯರ್‌ಗಳೇ ಇಲ್ಲ. ಹಾಗಾಗಿ, ಈ ವ್ಯಾಪ್ತಿಯಲ್ಲಿನ ರಸ್ತೆ, ಕಟ್ಟಡ, ಚರಂಡಿ, ಮತ್ತಿತರ ಕಾಮಗಾರಿಗಳು ಕುಂಟುತ್ತ ಸಾಗುತ್ತಿವೆ.
ರಾಣೆಬೆನ್ನೂರ ನಗರಸಭೆಯಲ್ಲಿ ಒಂದು ಎಎಇ ಹಾಗೂ ಮೂರು ಜೆಇ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯಕ್ಕೆ ಮೂವರು ಜೆಇಗಳಿದ್ದು, ಪ್ರಮುಖವಾದ ಎಇ ಹುದ್ದೆ ಖಾಲಿ ಇದೆ. ಇದರಿಂದ ಕೆಲಸಗಳ ವೇಗ ಕಡಿಮೆಯಾಗುತ್ತಿದೆ. ಈ ಕೂಡಲೆ ಸರ್ಕಾರ ಉಳಿದ ಹುದ್ದೆಗಳನ್ನು ಭರ್ತಿ ಮಾಡಬೇಕು.I ಮಲ್ಲಣ್ಣ ಅಂಗಡಿ, ರಾಣೆಬೆನ್ನೂರ ನಗರಸಭೆ ಸದಸ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 21 ಹುದ್ದೆಗಳು ಮಂಜೂರಾಗಿದ್ದು, 9 ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು ಖಾಲಿ ಉಳಿದಿವೆ. ಇದ್ದ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಿ ಕೆಲಸ ಮಾಡಲಾಗುತ್ತಿದೆ.I ಮಮತಾ ಪಾಟೀಲ, ಯೋಜನಾಧಿಕಾರಿ, ನಗರಾಭಿವೃದ್ಧಿ ಕೋಶ