ಭಾವನಾತ್ಮಕ ರಾಜಕಾರಣ ಬೇಡ, ಜನರ ಬದುಕು ಕಟ್ಟುವ ರಾಜಕಾರಣಬೇಕು: ಸಿಪಿಐನಿಂದ ಪ್ರತಿಭಟನೆ

mysore
Published on

ಮೈಸೂರು: ಭಾವನಾತ್ಮಕ ರಾಜಕಾರಣ ಬಿಟ್ಟು ಜನರ ಬದುಕು ಕಟ್ಟುವ ರಾಜಕಾರಣ ಬೇಕು. ಅದಕ್ಕಾಗಿ ಜನರ ಹಕ್ಕೊತ್ತಾಯಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.


ರಾಜ್ಯದ ಬಹುತೇಕ ತಾಲೂಕುಗಳು ಬರಗಾಲ ಎದುರಿಸುತ್ತಿದ್ದು, ರಾಜ್ಯ ಸರ್ಕಾರವು ಕೇಂದ್ರವನ್ನು ಬರ ಪರಿಹಾರ ನಿಧಿಗಾಗಿ ಬೇಡಿಕೆ ಸಲ್ಲಿಸಿದ್ದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಜನತೆ ಮತ್ತು ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕೇಂದ್ರ ಸರ್ಕಾರವು ರಾಜಕೀಯ ಕಾರಣಕ್ಕಾಗಿ ತಾರತಮ್ಯ ಎಸಗದೆ ರಾಜ್ಯ ಸರ್ಕಾರ ಸಲ್ಲಿಸಿರುವ 18,171 ಕೋಟಿ ರೂ. ಬೇಡಿಕೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಈ ಯೋಜನೆಗೆ ನೀಡುತ್ತಿರುವ ಅನುದಾನವನ್ನು ಕಡಿತಗೊಳಿಸಿರುವುದು ಖಂಡನೀಯ. ಈ ಯೋಜನೆಯಡಿ 100 ದಿನದಿಂದ 200 ದಿನಕ್ಕೆ ಹೆಚ್ಚಿಸಿ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು 600 ರೂ. ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.


ವಸತಿ ರಹಿತರ ಸಮಸ್ಯೆ ಗಂಭೀರವಾಗಿದೆ. ರಾಜ್ಯದಲ್ಲಿ 27 ಲಕ್ಷ ಕುಟುಂಬಗಳು ವಸತಿಹೀನವಾಗಿವೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ. 2018ರಲ್ಲಿ ಪ್ರಧಾನಿಯವರು ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಸ್ವಂತ ಮನೆಯನ್ನು ಕಲ್ಪಿಸಿಕೊಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ, ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಇನ್ನೂ ಸ್ವಂತ ಸೂರಿಲ್ಲದೆ ಬದುಕು ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಸತಿ ಹೀನರಿಗೆ ಮನೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.


ಹಿಂದಿನ ರಾಜ್ಯ ಬಿಜೆಪಿ ಸರ್ಕಾರವು 1948ರ ಕೈಗಾರಿಕೆ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 8 ರಿಂದ 12 ಗಂಟೆಗಳ ವರೆಗೆ ಹೆಚ್ಚಿಸಿತು. ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳೆಯದಲ್ಲಿ ದುಡಿಯುವಂತೆ ಕಾನೂನು ರೂಪಿಸಿತು. ಇದನ್ನು ವಾಪಸ್ ಪಡೆದು ಕಾರ್ಮಿಕರ ಹಿತಾಸಕ್ತಿ, ಹಕ್ಕು ಕಾಪಾಡಬೇಕು ಎಂದು ಆಗ್ರಹಿಸಿದರು.


ಬಿಜೆಪಿ ಸರ್ಕಾರದಲ್ಲಿ ತಿದ್ದುಪಡಿ ಮಾಡಿದ ಭೂ ಸುಧಾರಣಾ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಈ ಹಿಂದೆ ಕಾಂಗ್ರೆಸ್ ನೀಡಿದ ಭರವಸೆಯಂತೆ ಅಂಗನವಾಡಿ, ಅಕ್ಷರ ದಾಸೋಹ ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.


ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, ಉದ್ಯೋಗ ಸೃಷ್ಟಿಸುವುದು ಹಾಗಿರಲಿ, ಕಳೆದ ನಾಲ್ಕೈದು ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಪ್ರಮಾಣ ದೇಶದಲ್ಲಿ ಸೃಷ್ಟಿಯಾಗಿದೆ. ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ದಲಿತ ಕಾಲನಿ, ಬುಡಕಟ್ಟು ಹಾಡಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಗತ್ಯ ಹಣಕಾಸಿನ ನೆರವನ್ನು ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ಭರಿಸಬೇಕು. ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಮೂಲ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿ ವರದಿ) ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಮುಖಂಡರಾದ ಎಚ್.ಬಿ.ರಾಮಕೃಷ್ಣ, ಕೆ.ಎಸ್.ರೇವಣ್ಣ, ಕೆ.ಜಿ.ಸೋಮರಾಜೇಅರಸ್, ಎನ್.ಕೆ.ದಾವದಾಸ್, ಎಂ.ಶಿವಣ್ಣ, ಡಿ.ಜಗನ್ನಾಥ್, ಸಿ.ರಾಜು, ಡಿ.ಸುರೇಶ್, ಎನ್.ಕೃಷ್ಣ, ವಿ.ತ್ಯಾಗರಾಜನ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net