

ಪುತ್ತೂರು: ನಗರಸಭಾ ವ್ಯಾಪ್ತಿಯ ಸಾಲ್ಮರದ ಗುಂಪಕಲ್ಲು ನಿವಾಸಿ ಗೌರಿ ಕುಟುಂಬ ಕಳೆದ ಮೂವತ್ತೈದು ವರ್ಷಗಳಿಂದ ವಾಸಿಸುತ್ತಿದ್ದು, ಕಡು ಬಡತನದ ಈ ಕುಟುಂಬಕ್ಕೆ ಸರ್ಕಾರಿ ಯೋಜನೆಯ ಉಚಿತ ವಿದ್ಯುತ್ ಸಂಪರ್ಕ ಇಂದಿನವರೆಗೆ ಕಲ್ಪಿಸಲಾಗಿಲ್ಲ.
ನಗರಸಭೆಯಿಂದ ಕೊಡಮಾಡುವ ಈ ವಿದ್ಯುತ್ ಸಂಪರ್ಕಕ್ಕೆ 2 ವರ್ಷದ ಹಿಂದೆ ವಿವಿಧ ದಾಖಲೆ ಸಹಿತ 2 ಸಾವಿರ ರೂ. ಪಾವತಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ ಸಂದರ್ಭ ಇಂದು ಬರುತ್ತದೆ, ನಾಳೆ ಬರುತ್ತದೆ ಎನ್ನುವ ಸಿದ್ಧ ಉತ್ತರಗಳು ಮಾತ್ರ ಲಭ್ಯವಾಗುತ್ತಿದೆ ಎಂದು ಗುಂಪಕಲ್ಲು ನಿವಾಸಿ ಗೌರಿ ಅವರ ಆರೋಪ.
ಕಂಬ ಹಾಕುವ ಕಾಮಗಾರಿ ಅರ್ಧಕ್ಕೆ ಬಾಕಿ: ಸಾಲ್ಮರದ ರಸ್ತೆ ಬದಿಯಲ್ಲೇ ಇರುವ ಗೌರಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಯಾವುದೇ ತೊಂದರೆಯಿಲ್ಲದಿದ್ದರೂ, ಅನಗತ್ಯ ಕಾರಣಗಳನ್ನು ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ದಿನ ದೂಡಲಾಗುತ್ತಿದೆ. ಗೌರಿ ಅವರ ಜಾಗವನ್ನೇ ಬಳಸಿಕೊಂಡು ವಿದ್ಯುತ್ ತಂತಿಗಳನ್ನು ಜೋಡಿಸುವ ಅವಕಾಶವಿದ್ದರೂ, ಬೇರೆ ಮನೆಯವರ ಜಾಗದಿಂದ ವಿದ್ಯುತ್ ಕಂಬ ತರುವ ಪ್ರಯತ್ನ ನಡೆದಿದೆ. ಈ ಸಂದರ್ಭ ಜಾಗದ ವಾರಸುದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ವಿದ್ಯುತ್ ಕಂಬ ಹಾಕುವ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ.
ಆರೋಗ್ಯದ ಮೇಲೂ ಪರಿಣಾಮ: ನಾಲ್ವರು ಸದಸ್ಯರಿರುವ ಗೌರಿ ಕುಟುಂಬಕ್ಕೆ ಗೌರಿ ಅವರು ಮಾತ್ರ ಆಧಾರವಾಗಿದ್ದು, ಆಕೆಯ ಪತಿ ಆನಾರೋಗ್ಯ ಪೀಡಿತರಾಗಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಕೂಲಿನಾಲಿ ಮಾಡಿ ಸಂಪಾದಿಸಿದ ಹಣವನ್ನು ಡೀಸೆಲ್ಗಾಗಿ ಬಳಸಬೇಕಾದ ಅನಿವಾರ್ಯ ಪರಿಸ್ಥಿತಿ ಗೌರಿ ಕುಟುಂಬದ್ದು. ಡೀಸೆಲ್ ಹಾಕಿದ ದೀಪದಲ್ಲೇ ಕತ್ತಲು ಕಳೆಯುತ್ತಿರುವ ಈ ಕುಟುಂಬದಲ್ಲಿ ಶಾಲಾ ಶಿಕ್ಷಣ ಪೂರೈಸುವ ಮಕ್ಕಳೂ ಇದ್ದಾರೆ. ಪ್ರತಿದಿನವೂ ಡೀಸೆಲ್ ದೀಪದ ಹೊಗೆ ಸೇವಿಸುತ್ತಿರುವ ಕಾರಣ ಕುಟುಂಬದ ಆರೋಗ್ಯದ ಮೇಲೂ ಪರಿಣಾಮ ಬೀರಲಾರಂಭಿಸಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಸಾಲ್ಮರದ ಗುಂಪಕಲ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ನೀಡಲು ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ವಿದ್ಯುತ್ ಸಂಪರ್ಕಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. -ರೂಪಾ ಶೆಟ್ಟಿ, ಪೌರಾಯುಕ್ತರು ಪುತ್ತೂರು ನಗರಸಭೆ