ಗಂಗಾಕಲ್ಯಾಣಕ್ಕಿಲ್ಲ ವಿದ್ಯುತ್!: ಸಚಿವ ಮಾಧುಸ್ವಾಮಿ ತವರಿಗೆ ಅನುದಾನ ಕೊರತೆ?

19TMK_MI_Kolavebhavi (1) 01
Published on


ಸೋರಲಮಾವು ಶ್ರೀಹರ್ಷ ತುಮಕೂರು

ಸಣ್ಣ ನೀರಾವರಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯಲ್ಲಿ 2018ರಲ್ಲಿಯೇ ಕೊರೆದಿರುವ ಕೊಳವೆಬಾವಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ದೊರಕಿಲ್ಲ.


ಕೃಷಿಯ ಕನಸು ಹೊತ್ತು ಜಮೀನಿನಲ್ಲಿ ಕೊರೆದಿರುವ ಬೋರ್‌ವೆಲ್ ಭೂತಪ್ಪನಂತೆ ಕುಳಿತಿದ್ದು, ರೈತರು ಇಲಾಖೆ ಬಾಗಿಲಿಗೆ ಎಡತಾಕಿ ಸುಸ್ತಾಗಿದ್ದಾರೆ.
ಸಣ್ಣ ನೀರಾವರಿ ಇಲಾಖೆ 2019ರಿಂದ ಜಿಲ್ಲೆಯಲ್ಲಿ ಕೊಳವೆಬಾವಿಗಳನ್ನು ನೀಡುವುದನ್ನೇ ನಿಲ್ಲಿಸಿದೆ. ಇದಕ್ಕೂ ಹಿಂದೆ ಕೊರೆದಿರುವ 978 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವೇ ಸಿಕ್ಕಿಲ್ಲ, ಇತ್ತೀಚೆಗಷ್ಟೇ 240 ಕೊಳವೆಬಾವಿಗೆ ವಿದ್ಯುತ್‌ಸಂಪರ್ಕ ನೀಡಲಾಗಿದೆಯಾದರೂ ಕೆಲವು ಕೊಳವೆಬಾವಿಗಳಲ್ಲಿ ನೀರೇ ಬತ್ತಿ ಹೋಗಿದೆ. ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರ


ಚಿಕ್ಕನಾಯಕನಹಳ್ಳಿ ಹಾಗೂ ಬಿಜೆಪಿ ಶಾಸಕರಿರುವ ಶಿರಾ ತಾಲೂಕಿನಲ್ಲಿಯೇ ಹೆಚ್ಚು ಕೊಳವೆಗಳು ವಿದ್ಯುತ್ ಸಂಪರ್ಕಕ್ಕೆ ಕಾದಿವೆ. ಜಿಲ್ಲೆಯಲ್ಲಿ ಬರೋಬ್ಬರಿ 738 ಕೊಳವೆಬಾವಿಗಳು ಕಳೆದ 4 ವರ್ಷಗಳಿಂದಲೂ ವಿದ್ಯುತ್ ಸಂಪರ್ಕವಿಲ್ಲದೆ ಅನುಪಯುಕ್ತವಾಗಿವೆ. ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ಸ್ವೀಕೃತವಾಗಿರುವ 140 ಕಾಮಗಾರಿಗೆ ಇನ್ನೂ ತಾಂತ್ರಿಕ ಅನುಮೋದನೆಯೇ ಸಿಕ್ಕಿಲ್ಲ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ 72 ಕಾಮಗಾರಿ ಆರಂಭವಾಗಿಲ್ಲ.

ವಿದ್ಯುತ್ ಸಂಪರ್ಕವಿಲ್ಲದೆ ಬಿಲ್ ಪಾವತಿ?: ಗುಬ್ಬಿ ತಾಲೂಕಿನ ಹರದಗೆರೆ ಚಿಕ್ಕರಂಗಯ್ಯ ಎಂಬುವವರಿಗೆ 2018ರಲ್ಲಿ ಕೊಳವೆಬಾವಿ ಕೊರೆದು 2019ರಲ್ಲಿ ವಿದ್ಯುದೀಕರಣಕ್ಕೆ ಟೆಂಡರ್ ನೀಡಲಾಗಿದ್ದರೂ, ಈವರೆಗೂ ಪರಿವರ್ತಕ ಅಳವಡಿಸಿಲ್ಲ, ಇಂತಹ ನೂರಾರು ಪ್ರಕರಣಗಳು ಜಿಲ್ಲೆಯಲ್ಲಿವೆೆ. ಬಡ ರೈತರಿಗೆ ಮೋಟಾರ್, ಪಂಪ್, ಕೇಬಲ್ ಕೊಟ್ಟು ಪ್ರಚಾರ ಪಡೆದಿರುವ ಆಯಾ ಕ್ಷೇತ್ರದ ಶಾಸಕರು ವಿದ್ಯುದೀಕರಣ ಆಗದೆ ಕೊಳವೆಬಾವಿ ಅನುಪಯುಕ್ತವಾಗಿರುವ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ದೊಡ್ಡ ದುರಂತ.
ಎಲ್ಲ ಬೋರ್‌ವೆಲ್‌ನಲ್ಲೂ ನೀರು ಕೊರೆದಿರುವ ಎಲ್ಲ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗಿರುವುದು ಮತ್ತೊಂದು ವಿಸ್ಮಯ. 2018ರಲ್ಲಿ ಜಿಲ್ಲೆಯಲ್ಲಿ ಬರವಿದ್ದು ರೈತರು ಸ್ವಂತ ಹಣದಲ್ಲಿ ಹತ್ತಾರು ಕೊಳವೆಬಾವಿ ಕೊರೆದರೂ ಹನಿ ನೀರು ಬರದಿರುವಾಗ ಇಲಾಖೆಯಿಂದ ಕೊರೆದ ಬೋರ್‌ವೆಲ್ ಸಕ್ಸಸ್ ಎಂಬ ಸ್ಟೋರಿಯೇ ಕೌತುಕ. ಕಾಮಗಾರಿ ವೆಚ್ಚದಲ್ಲಿ ಕೊಳವೆಬಾವಿ ಕೊರೆಯುವುದಕ್ಕಿಂತ ಮೋಟಾರ್, ಪಂಪ್, ಕೇಬಲ್, ಪೈಪ್ ಹಾಗೂ ವಿದ್ಯುದೀಕರಣಕ್ಕೆ ಹೆಚ್ಚು ಬಜೆಟ್ ಮೀಸಲಿಡುವುದರಿಂದ ಕೊರೆದ ಎಲ್ಲ ಕೊಳವೆಬಾವಿಗಳೂ ಸಕ್ಸಸ್ ಎಂದು ಬಿಂಬಿಸಿರುವ ಆರೋಪವಿದೆ. ಬೋರ್ ಕೊರೆಯುವಾಗ ಕೆಲವು ಕಡೆ ಟ್ಯಾಂಕಿನ ನೀರು ಸುರಿದ ಪೋಟೋ ತೆಗೆದುಕೊಂಡು ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ತನಿಖೆಯಾಗಬೇಕಿದೆ.


ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಇಲಾಖೆಯಿಂದ 2018ರಲ್ಲಿ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುದೀಕರಣ 4 ವರ್ಷದಿಂದ ಬಾಕಿ ಇದೆ, ಬೆಸ್ಕಾಂಗೆ ಠೇವಣಿ ಕಟ್ಟಲು ಇಲಾಖೆಯಿಂದ ಅನುದಾನಕ್ಕೆ ಕಾಯುತ್ತಿದ್ದು ಬಂದ ಕೂಡಲೇ ಕಾಮಗಾರಿ ಆರಂಭವಾಗಲಿದೆ.
-ರವಿಸೂರನ್, ಇಇ, ಸಣ್ಣ ನೀರಾವರಿ ಇಲಾಖೆ

ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆದಾಗ ಬದುಕು ಹಸನಾಗಲಿದೆ ಎಂದು ಕಟ್ಟಿಕೊಂಡಿದ್ದ ಕನಸು ನಾಲ್ಕು ವರ್ಷದಿಂದ ಕನಸಾಗಿಯೇ ಉಳಿದಿದೆ. ಕೊರೆದ ಬೋರ್‌ನಲ್ಲಿ ನೀರು ಇದೆಯೊ, ಬತ್ತಿದೆಯೋ ಗೊತ್ತಿಲ್ಲ. ಅನ್ಯಾಯ ಮಾಡಿಬಿಟ್ಟರು. ಕರೆಂಟ್ ಲೈನ್ ಎಳೆದು ಹೋದವರು ಈ ಕಡೆ ತಿರುಗಿಯೂ ನೋಡಿಲ್ಲ, ಸಣ್ಣ ನೀರಾವರಿ ಕಚೇರಿಗೆ ಅಲೆದು ಸಾಕಾಗಿದೆ.
- ಚಿಕ್ಕರಂಗಯ್ಯ, ಫಲಾನುಭವಿ, ಅರದಗೆರೆ, ಗುಬ್ಬಿ ತಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net