ಗಂಗಾಧರ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

IMG-20240626-WA0017.jpg
Published on

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠ ಶ್ರೀಜಗದ್ಗುರು ಗಂಗಾಧರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ ಆರ್. ಶೆಟ್ಟಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ನಾನಾ ಕಾಯಿಲೆಗಳು ಮನುಷ್ಯನಿಗೆ ಬರುತ್ತವೆ. ಇವುಗಳಿಂದ ದೂರ ಇರುವುದೇ ಕ್ಷೇಮ. ಮಾದಕ ವ್ಯಸನೀಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡೂ ಹದಗೆಡುತ್ತದೆ. ಕೌಟುಂಬಿಕ, ಸಾಮಾಜಿಕ, ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ನಿಮ್ಮ ಜೀವನವನ್ನು ಕಾಪಾಡಿಕೊಂಡು ಕುಟುಂಬ ಹಾಗೂ ನೆರೆ ಹೊರೆಯವರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಿ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕಿಮ್ಸ್ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಹಿರೇಮಠ, ಕೆಲವರು ಮೋಜು ಮಸ್ತಿಗಾಗಿ ಮಾಡುವ ಮಾದಕ ವಸ್ತು ಸೇವನೆಯು ಮುಂದೆ ಚಟವಾಗಿ ಪರಿಣಮಿಸುತ್ತದೆ. ಮದ್ಯಪಾನ, ಧುಮಪಾನಗಳನ್ನು ಕೈಬಿಡಲಾಗದೆ ಪರಿತಪಿಸುತ್ತಾರೆ. ಇದು ಸಾಮಾಜಿಕ ಸಮಸ್ಯೆಗೂ ಕಾರಣವಾಗುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಮಾದಕ ವಸ್ತು ಸೇವನೆಯಿಂದ ದೂರ ಉಳಿಯಬೇಕಾದರೆ ಹಾಗೂ ದುಶ್ಚಟ ಬಿಡಲು ಚಿಕಿತ್ಸೆ, ಸಲಹೆ ಪಡೆಯಬೇಕಾದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಾರ್ಗದರ್ಶನ ನೀಡಲಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಯೋಜನಾಧಿಕಾರಿ ಲೀಲಾಮೂರ್ತಿ ಹಾಗೂ ಜಗದ್ಗುರು ಗಂಗಾಧರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಂ. ಸಾಲಿಮಠ ಉಪಸ್ಥಿತರಿದ್ದರು.

ಕೃಷಿ ಮೇಲ್ವಿಚಾರಕ ಶಿವಾನಂದ, ಪದ್ಮಾವತಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net