

ಬ್ಯಾಡಗಿ: ಜಾತ್ರೆ, ಉತ್ಸವ ಸಂದರ್ಭದಲ್ಲಿ ಜರುಗುವ ಮೆರವಣಿಗೆ ವೇಳೆ ಡಿಜೆ ಹಚ್ಚಲು ಅವಕಾಶ ಇರುವುದಿಲ್ಲ, ಎಲ್ಲರೂ ಸಹಕರಿಸುವ ಮೂಲಕ ಶಾಂತಿ ಕಾಪಾಡಬೇಕು. ಶ್ರದ್ಧೆ-ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಿಪಿಐ ಮಹಾಂತೇಶ ಲಂಬಿ ಹೇಳಿದರು.
ಪಟ್ಟಣದಲ್ಲಿ ಮಾ.1 ರಿಂದ 7ರವರೆಗೆ ಪಟ್ಟಣದಲ್ಲಿ ನಡೆಯಲಿರುವ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಕರೆಯಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ರೆಯ ಮೆರವಣಿಗೆಯಲ್ಲಿ ಡಿಜೆ ಹಚ್ಚಲು ಅವಕಾಶ ನೀಡುವುದಿಲ್ಲ, ಈ ಸಂದರ್ಭದಲ್ಲಿ ಗದ್ದಲ ಹಾಗೂ ಇತರೆ ಚಟುವಟಿಕೆಗೆ ಅವಕಾಶ ನೀಡದೆ ಪಟ್ಟಣದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಉತ್ಸವ ಯಶಸ್ವಿಗೊಳಿಸಬೇಕು. ಪೊಲೀಸ್ ಇಲಾಖೆ ಕೂಡ ಇದಕ್ಕೆ ಸಹಕರಿಸುತ್ತದೆ. ಜಾತ್ರೆ ಎಂದ ಮೇಲೆ ಪರಸ್ಥಳದಿಂದ ಜನರು ಸೇರುವುದು ಸಹಜ, ಅವರೆಲ್ಲರ ಸುರಕ್ಷತೆಯೂ ನಮ್ಮ ಮೇಲಿರುವ ಜವಾಬ್ದಾರಿಯಾಗಿದೆ. ಮಹಿಳೆಯರು ಹಾಗೂ ಎಲ್ಲ ಸಾರ್ವಜನಿಕರು ಉತ್ಸವದಲ್ಲಿ ಜಾಗ್ರತೆಯಿಂದ ಇರಬೇಕು. ತಮಗೆ ಏನಾದರೂ ತೊಂದರೆಯಾದಲ್ಲಿ ತಕ್ಷಣ ಪೊಲೀಸ್ ಇಲಾಖೆಯ ನೆರವು ಪಡೆಯಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಯಾರಾದರು ಕಾನೂನು ಕೈಗೆ ತೆಗೆದುಕೊಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಪಟ್ಟಣವು ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದು ಬ್ಯಾಡಗಿಯಲ್ಲಿ ಹಿಂದಿನಿಂದ ಶಾಂತಿಯುತವಾಗಿ ಹಬ್ಬ ಆಚರಣೆ, ಉತ್ಸವ, ಜಾತ್ರೆಗಳು ನಡೆಸುತ್ತಾ ಬಂದಿದ್ದೇವೆ. ಎಲ್ಲರೂ ಶಾಂತಿಯುತವಾಗಿ ಸೌಹಾ ರ್ದತೆಯಿಂದ ಗ್ರಾಮದೇವತೆ ಜಾತ್ರೆಯನ್ನು ಸಂಭ್ರಮದಿಂದ ಆಚರಿಸೋಣ. 7 ದಿನಗಳ ಕಾಲ ಬಹುದೊಡ್ಡ ಜಾತ್ರೆಯನ್ನು ನಮ್ಮ ಮನೆಯ ಹಬ್ಬದಂತೆ ಆಚರಿಸೋಣವೆಂದು ಮನವಿ ಮಾಡಿದರು.
ಪುಟ್ಟಪ್ಪ ಛತ್ರದ, ಗಂಗಣ್ಣ ಎಲಿ, ಬಸವರಾಜ ಛತ್ರದ, ಗಂಗಾಧರ ಶರ್ಮಾ ಹಿರೇಮಠ, ಚಂದ್ರಣ್ಣ ಶೆಟ್ಟರ, ನಾಗರಾಜ ದೇಸೂರ, ಸುಭಾಸ ಮಾಳಗಿ, ದುರ್ಗೇಶ ಗೋಣೆಮ್ಮನವರ, ಸೋಮಣ್ಣ ಸಂಕಣ್ಣನವರ, ಶಂಭು ಮಠದ, ಪಿಎಸ್‌ಐ ಅರವಿಂದ, ಆರ್.ಜಿ. ಕಳ್ಯಾಳ ಇದ್ದರು.