

ಹಾನಗಲ್ಲ: ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯಗಳ ಅನುಷ್ಠಾನದ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ತಾರತಮ್ಯವಿಲ್ಲದಂತೆ ಎಲ್ಲ ರೈತರಿಗೂ ಸಹಾಯಧನ ಯೋಜನೆಗಳನ್ನು ಒದಗಿಸುವಂತೆ ಒತ್ತಾಯಿಸಿ ಶಾಸಕ ಶ್ರೀನಿವಾಸ ಮಾನೆ ಮೂಲಕ ರೈತ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.
ಹನಿ ನೀರಾವರಿ ಅಳವಡಿಸಿಕೊಂಡ 7 ವರ್ಷಗಳ ನಂತರ ಮತ್ತೆ ಹಾಳಾದ ಸಾಮಗ್ರಿ ಬದಲಿಸಿ ಹೊಸ ಹನಿ ನೀರಾವರಿಗೆ ಹಿಂದುಳಿದ ವರ್ಗಗಳವರಿಗೆ ನೀಡಿದಂತೆ ಎಲ್ಲ ಸಮುದಾಯಕ್ಕೆ ಶೇ. 90 ಸಬ್ಸಿಡಿ ನೀಡಬೇಕು. ಪರಿಶಿಷ್ಟ ವರ್ಗಗಳಿಗೆ ನೀಡಿರುವ ಸೌಲಭ್ಯವನ್ನು ಎಲ್ಲ ರೈತರಿಗೂ ವಿಸ್ತರಿಸಬೇಕು. ಅಂತರ್ಜಲ ಕುಸಿತ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ರೈತರು ಕೃಷಿಗೆ ಪರದಾಡುವಂತಾಗಿದೆ. ಹನಿ ನೀರಾವರಿ ಸೌಲಭ್ಯಕ್ಕೆ ಹೆಚ್ಚು ಅನುದಾನ ನೀಡಿದರೆ ಅಂತರ್ಜಲದ ಸಮರ್ಪಕ ಬಳಕೆಯೂ ಸಾಧ್ಯ. ಅಲ್ಲದೆ, ರೈತರು ಆರ್ಥಿಕ ಸಂಕಷ್ಟದಿಂದಲೂ ರಕ್ಷಿಸಿಕೊಳ್ಳಲು ಸಾಧ್ಯ. ಈಗಿರುವ ಹೊಸ ತೋಟಗಾರಿಕೆ ಇಲಾಖೆ ನಿಯಮಗಳು ರೈತರ ಪಾಲಿಗೆ ಮಾರಕವಾಗಿವೆ. ಕೂಡಲೇ ಸರ್ಕಾರದ ಮೇಲೆ ಒತ್ತಡ ಹಾಕಿ ಸಮುದಾಯದ ಹೆಸರಿನಲ್ಲಿ ನೀರಾವರಿ ಸೌಲಭ್ಯಕ್ಕೆ ಅವಕಾಶ ಕೊಡದೇ ಎಲ್ಲ ರೈತರನ್ನು ರೈತ ಸಮುದಾಯ ಎಂದು ಪರಿಗಣಿಸಿ ಒಂದೇ ರೀತಿಯ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಇದರೊಂದಿಗೆ ಅತಿವೃಷ್ಟಿ ಪರಿಹಾರ, ವರದಾ ಬೇಡ್ತಿ ನದಿ ಜೋಡಣೆ, ಹಾನಗಲ್ಲಿಗೆ ರೈಲು ಮಾರ್ಗ, ಸಂಗೂರು-ಕಾತೂರು ರಸ್ತೆ ಮೇಲ್ದರ್ಜೆಗೇರಿಸುವುದು, ತಾಲೂಕಿನ ಕೆರೆಗಳ ಹೂಳೆತ್ತುವುದು, ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ತುಂಬುವುದು, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳ ಪಠ್ಯದಲ್ಲಿ ಕೃಷಿ ಕುರಿತು ವಿಷಯಗಳನ್ನಿಡುವುದು, ಹಾನಗಲ್ಲಿನ ಕೃಷಿ ಮಾರುಕಟ್ಟೆ ಮೇಲ್ದರ್ಜೆಗೇರಿಸುವುದು, ವಕ್ಪ ಹೆಸರಿನಲ್ಲಿ ರೈತರ ಜಮೀನಿಗೆ ತೊಂದರೆಯಾಗದಂತೆ ರೈತಪರ ಕಾನೂನು ರೂಪಿಸುವುದು ಸೇರಿ ಹಲವು ವಿಷಯಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಳಿಗಾರ, ತಾಲೂಕು ಅಧ್ಯಕ್ಷ ಚನ್ನಬಸಪ್ಪ ಹಾವಣಗಿ, ಜಿಲ್ಲಾ ಮುಖಂಡ ಸಿದ್ದನಗೌಡ ಪಾಟೀಲ, ತಾಲೂಕು ಸಂಚಾಲಕ ಮೈಲಾರಿ ರಿತ್ತಿ, ಬಸವರಾಜ ಪೂಜಾರ, ಬಸವರಾಜ ಬ್ಯಾತನಾಳ, ಗಂಗಾಧರ ಗುಡ್ಡಪ್ಪನವರ ಇತರರು ಇದ್ದರು.