ರಕ್ತದಾನಕ್ಕೆ ಭೇದಭಾವ ಇಲ್ಲ, ಸಚಿವ ಎಂಟಿಬಿ ನಾಗರಾಜ್ ಅಭಿಪ್ರಾಯ

mtb blood donation
Published on

ಬೆಂಗಳೂರು ಗ್ರಾಮಾಂತರ: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರು ರಕ್ತ ಹರಿಸಿದ್ದಾರೆ ಅಂಥ ಮಹನೀಯರ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆಯ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನಕ್ಕೆ ಬಡವ ಬಲ್ಲಿದ ಎಂಬ ಭೇದಭಾವವಿಲ್ಲ. ಅಪಘಾತಗಳಾದಾಗ ರಕ್ತದ ಕೊರತೆಯಿಂದ ಜನ ಸಾಯುತ್ತಾರೆ. ಆ ಕ್ಷಣದಲ್ಲಿ ರಕ್ತ ದೊರೆತರೆ ಅನೇಕರ ಪ್ರಾಣ ರಕ್ಷಣೆಯಾಗುತ್ತದೆ. ಆದ್ದರಿಂದ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.

ರಕ್ತದಾನದ ಬಗ್ಗೆ ಕೆಲವು ಅಪನಂಬಿಕೆ, ಅಪಪ್ರಚಾರಗಳಿವೆ. ಆದರೆ, ಅವೆಲ್ಲವೂ ನಿರರ್ಥಕವಾದವು. ಇಂಥ ವದಂತಿಗಳಿಗೆ ಕಿವಿಗೊಡದೆ ರಕ್ತದಾನ ಮಾಡಬೇಕು ಎಂದರು.

ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ನಮ್ಮೆಲ್ಲರ ನಾಯಕ. ಆತ ಭಾರತೀಯರಿಗೆ ಮಾದರಿ. ಅವರ ಸ್ಮರಣಾರ್ಥ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದು ಹೇಳಿದರು.

ಶಿಬಿರದಲ್ಲಿ ನೂರು ಯೂನಿಟ್​ಗೂ ಹೆಚ್ಚಿನ ರಕ್ತ ಸಂಗ್ರಹವಾಗಿದೆ. ಮುಂದೆ ಕೂಡ ಇಂಥ ಶಿಬಿರಗಳನ್ನು ಆಯೋಜಿಸಿ, ರಕ್ತದ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net