

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರಿಗೆ ಬದ್ಧತೆ, ತಾಳ್ಮೆ, ಸೌಜನ್ಯ ಮುಖ್ಯ. ನೈತಿಕ ಶಿಕ್ಷಣದ ತಳಹದಿ ಮೇಲೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ರೂಢಿಸಿ ಜವಾಬ್ದಾರಿಗಳ ಬಗ್ಗೆ ಮನನ ಮಾಡಬೇಕು. ಮಕ್ಕಳಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಒಂದೇ ರೀತಿ ಶಿಕ್ಷಣ ನೀಡಬೇಕು ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ರಾಷ್ಟ್ರೊತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ (ಶಿಕ್ಷಣ ಪ್ರಕಲ್ಪ) ಮತ್ತು ಜನತಾ ಶಿಕ್ಷಣ ಸಮಿತಿ ಆಶ್ರಯದಲ್ಲಿ ಜೆಎಸ್ಎಸ್ ಶಾಲೆಗಳ ಮತ್ತು ಜೆಎಸ್ಎಸ್ ಐಟಿಐ ಕಾಲೇಜು ಶಿಕ್ಷಕರಿಗೆ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ಸಹಮಿಲನ ಅತಿಥಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರೇ ದೇವರ ಸ್ಥಾನದಲ್ಲಿದ್ದು, ಜೀವನಕ್ಕೆ ಭರವಸೆ ಮತ್ತು ಆಶಾದಾಯಕರಾಗಿತ್ತಾರೆ. ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಉದ್ಯೋಗಾವಕಾಶದ ಮಾಹಿತಿ ನೀಡಿದರೆ ನಿರ್ದಿಷ್ಟ ಗುರಿ ಹೊಂದಲು ಸಾಧ್ಯ. ಸತತವಾಗಿ ಪುಸ್ತಕಗಳ ಓದುವಿಕೆ ಮತ್ತು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ವಿಷಯಗಳ ಬಗ್ಗೆ ಮಾಹಿತಿ ತಿಳಿಸಿದಾಗಲೇ ಕ್ಲಿಷ್ಟಕರ ಸಮಸ್ಯೆಗೆ ಪರಿಹಾರ ನೀಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜ ತಲ್ಲೂರ ಮಾತನಾಡಿದರು. ಎಸ್.ಆರ್. ತಲ್ಲೂರ ಪ್ರತಿಷ್ಠಾನದಿಂದ ಶಿಕ್ಷಕರಿಗೆ ಸಾಮಾಜಿಕ ಕಳಕಳಿಯ ಮತ್ತು ಉತ್ತಮ ಮೌಲ್ಯಗಳನ್ನು ಸಾರುವ ಪುಸ್ತಕಗಳನ್ನು ವಿತರಿಸಲಾಯಿತು.
ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಪ್ರಾಧ್ಯಾಪಕ ವಿನಾಯಕ ಭಟ್ ಶೇಡಿಮನಿ ಪಂಚ ಪರಿವರ್ತನೆ ವಿಷಯ, ತಾಳಮದ್ದಳೆಯ ಪ್ರಸಿದ್ಧ ಅರ್ಥಾಧಿಕಾರಿಗಳು, ಪ್ರೊ. ಎಂ.ಎನ್. ಹೆಗಡೆ ಸಮಾಜದ ದೃಷ್ಟಿಯಲ್ಲಿ ಶಿಕ ಕುರಿತು ಉಪನ್ಯಾಸ ನೀಡಿದರು.
ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಶಾಲಾ ಪ್ರಾಚಾರ್ಯರಾದ ಮೈನಾವತಿ ದಿವಟೆ, ರೇಣು ಪಾಟೀಲ, ವಿದ್ಯಾ ಕೊಲ್ಹಾಪುರೆ, ವೀರೇಂದ್ರಗೌಡ ಪಾಟೀಲ, ಇತರರು ಇದ್ದರು.
ಮಂಜುನಾಥ ಚಟ್ಟೇರ ನಿರೂಪಿಸಿದರು. ಮಹೇಶ ಬಗಲಿ ವಂದಿಸಿದರು.