ಓಲೆಯೂ ಇಲ್ಲ, ಹಣವೂ ವಾಪಸ್ ಇಲ್ಲ: ವೈದ್ಯೆಗೆ ಧೋಖಾ

crime2
Published on

ಚಿಕ್ಕಬಳ್ಳಾಪುರ:ಸಾಲಿಟೇರ್ ಡೈಮಂಡ್ ಸ್ಟಡ್ (ಕಿವಿಯೋಲೆ) ಮಾಡಿಸಿಕೊಡುವುದಾಗಿ ನಂಬಿಸಿ ಚಿಂತಾಮಣಿ ನಗರದ ಮಹಿಳೆಗೆ 31.75 ಲಕ್ಷ ರೂ. ವಂಚಿಸಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಎನ್.ಆರ್. ಬಡಾವಣೆಯ ಖಾಸಗಿ ನರ್ಸಿಂಗ್ ಹೋಮ್ ನ ವೈದ್ಯೆ ಡಾ. ಕೆ.ವಿ. ಮಂಜುಳಾ ವಂಚನೆಗೊಳಗಾದವರು. ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಓಂ ಸಾಯಿ ಡೈಮಂಡ್ಸ್ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಆಚಾರ್ಯ ವಿರುದ್ಧ ವಂಚನೆ ದೂರು ದಾಖಲಾಗಿದೆ. ವಜ್ರದ ಓಲೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದ ಮಂಜುಳಾ ಏ.17ರಂದು ಓಂ ಸಾಯಿ ಡೈಮಂಡ್ಸ್ ಅಂಗಡಿಯಲ್ಲಿ ಬೆಲೆ ವಿಚಾರಿಸಿದ್ದಾರೆ. ಸುಬ್ರಹ್ಮಣ್ಯ ಆಚಾರ್ಯ ಅವರು ಮಂಜುಳಾ ಎದುರೇ ಮುಂಬೈಗೆ ಕರೆ ಮಾಡಿ ಬೆಲೆ ಬಗ್ಗೆ ತಿಳಿಸಿ, ನಂತರ ಏ.23 ಮತ್ತು 29ರಂದು ವಾಟ್ಸ್ಆ್ಯಪ್ನಿಂದ ಆಭರಣದ ವಿವರಗಳನ್ನು ಕಳಿಸಿ ಮುಂಗಡ ಹಣ ಪಾವತಿಸುವಂತೆ ಕೋರಿದ್ದಾರೆ.

ಸುಬ್ರಹ್ಮಣ್ಯ ಆಚಾರ್ಯ ಅವರ ೋನ್ಪೇ ಖಾತೆಗೆ 50 ಸಾವಿರ ರೂ. ಕಳಿಸಿರುವ ಮಂಜುಳಾ ನಂತರ ವಿವಿಧ ಹಂತಗಳಲ್ಲಿ ಒಟ್ಟು 31.75 ಲಕ್ಷ ರೂ. ನಗದು ಹಾಗೂ ಪೋನ್ಪೇ ಮೂಲಕ ಪಾವತಿಸಿದ್ದಾರೆ. ಆದರೆ, ಸುಬ್ರಹ್ಮಣ್ಯ ಆಚಾರ್ಯ ಹಣ ಪಡೆದ ನಂತರ ವಜ್ರದ ಓಲೆಯನ್ನೂ ನೀಡದೆ ಹಣವನ್ನು ವಾಪಸ್ ಕೊಡದೆ ವಂಚಿಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಚಿಂತಾಮಣಿ ನಗರ ಠಾಣೆಯಲ್ಲಿ ಮಂಜುಳಾ ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ನಿರಂತರವಾಗಿ ಆನ್ ಲೈನ್ ನಲ್ಲಿ ಸುಳ್ಳು ಮಾಹಿತಿ ನೀಡಿ ವಂಚಿಸುವ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net