ಅಧ್ಯಕ್ಷರಿಂದ ನಡೆದಿಲ್ಲ ಅಭಿವೃದ್ಧಿ ಕಾರ್ಯ

13 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಚಂದ್ರಕಾಂತ ಬೆಲ್ಲದ 3 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ, ಹೋರಾಟ ಸಹ ನಡೆಸಿಲ್ಲ. ಸಭೆಗಳ ಅಧ್ಯಕ್ಷತೆಗೆ ಮಾತ್ರ ಸೀಮಿತವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಗುರುರಾಜ ಹುಣಸಿಮರದ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಕಾಂತ ಬೆಲ್ಲದ ನಗರದ ಸಾಕಷ್ಟು ಸಂಘ-ಸಂಸ್ಥೆಗಳಿಗೆ ಅಧ್ಯಕ್ಷರಾಗಿದ್ದಾರೆ. ಅದರಲ್ಲಿ ವಿದ್ಯಾವರ್ಧಕ ಸಂಘವೂ ಒಂದು. ಆದರೆ ಕನ್ನಡ, ನೆಲ, ಜಲ, ಭಾಷೆ ವಿಚಾರವಾಗಿ ಒಮ್ಮೆಯೂ ಅವರು ಧ್ವನಿ ಎತ್ತಿಲ್ಲ. ಇಂತಹವರು ಅಧ್ಯಕ್ಷರಾಗಿ ಮುಂದುವರೆದರೆ ಸಂಸ್ಥೆ ಮುಚ್ಚುವ ಸ್ಥಿತಿಗೆ ಬರಲಿದೆ ಎಂದರು.

ದೊಡ್ಡ ಮಟ್ಟದ ಚಳವಳಿಗೆ ನಾಂದಿ ಹಾಡಿರುವ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ರಾಜಕೀಯ ಪ್ರವೇಶ ಆಗಿರುವುದು ಖೇದಕರ ಸಂಗತಿ. ಎಲ್ಲರೂ ಸೇರಿ ಒಮ್ಮತದ ನಿರ್ಧಾರದಿಂದ ಸಾಹಿತಿಗಳನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪ್ರಯತ್ನ ಮಾಡಬೇಕು. ಈ ಕಾರ್ಯಕ್ಕೆ ನಾನು ಸದಾ ಸಿದ್ಧನಾಗಿದ್ದೇನೆ. ರಾಜಕಾರಣಿಗಳು ಅಧ್ಯಕ್ಷರಾದರೆ ಸರ್ಕಾರದ ಮಟ್ಟದಲ್ಲಿ ಗಟ್ಟಿ ಧ್ವನಿ ಎತ್ತುವುದು ಅಸಾಧ್ಯ. ಸಾಹಿತಿಗಳ ಮಾತಿಗೆ ಸರ್ಕಾರವೂ ಗೌರವ ನೀಡಲಿದೆ. ಹೀಗಾಗಿ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಈ ನಿರ್ಧಾರಕ್ಕೆ ಎಲ್ಲರೂ ಒಪ್ಪಿದರೆ ನಾನು ಹಿಂದೆ ಸರಿಯಲು ಸಿದ್ಧ ಎಂದರು.

ನಗರದಲ್ಲಿನ ಎಲ್ಲ ಸಂಘ-ಸಂಸ್ಥೆಗಳು ರಾಜಕಾರಣಿಗಳಿಂದ ಹಾಳಾಗುತ್ತಿವೆ. ಇದಕ್ಕೆ ಮಠಗಳೂ ಹೊರತಾಗಿಲ್ಲ. ಇದೀಗ ವಿದ್ಯಾವರ್ಧಕ ಸಂಘ ಯಾವುದೇ ಹೋರಾಟಕ್ಕೆ ಮುಂದಾಗದೆ, ಕೇವಲ ದತ್ತಿ ಕಾರ್ಯಕ್ರಮಗಳಿಗೆ ಸೀಮಿತವಾದಂತಾಗಿದೆ. ಇಂತಹ ದಯನೀಯ ಸ್ಥಿತಿಯಿಂದ ಹೊರಬಂದು, ಮೊದಲಿನಂತೆ ಹೋರಾಟದ ಕೇಂದ್ರ ಬಿಂದುವಾಗುವಂತೆ ಮಾಡಲು ಗಟ್ಟಿಯಾಗಿ ಮಾತನಾಡುವ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎಂದು ಆಗ್ರಹಿಸಿದರು.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net