

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ನಗರದ ಅಪಾಯಕಾರಿ ಹಾಗೂ ವಾಹನ ದಟ್ಟಣೆಯ ಸರ್ಕಲ್ ನಂತೂರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಓವರ್‌ಪಾಸ್ ಪ್ರಸ್ತಾವನೆ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಡತದಲ್ಲೇ ಬಾಕಿಯಾಗಿದೆ.
ನಂತೂರು ವೃತ್ತದಲ್ಲಿ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಓವರ್‌ಪಾಸ್ ಪ್ರಸ್ತಾವನೆಯನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಕಳುಹಿಸಿ ವರ್ಷ ಹಲವಾದರೂ ಇನ್ನೂ ಯೋಜನೆಗೆ ಅನುಮತಿ ದೊರಕಿಲ್ಲ. ಬೆಳಗ್ಗೆ ಹಾಗೂ ಸಂಜೆಯ ವೇಳೆ ಇಲ್ಲಿ ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ವೃತ್ತ ಅಪಘಾತ ವಲಯ ಆಗಿರುವುದರಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ದಶಕದಿಂದ ಇರುವ ಬೇಡಿಕೆ ಇನ್ನೂ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ.
ಇಲ್ಲಿ ಓವರ್‌ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಹಲವು ವರ್ಷದ ಬೇಡಿಕೆ. ಜನರು ಸಂಬಂಧಪಟ್ಟ ಜನಪ್ರತಿನಿಧಿಗಳು, ಹೆದ್ದಾರಿ ಇಲಾಖೆ ಹಾಗೂ ಸರ್ಕಾರವನ್ನು ಹಲವಾರು ವರ್ಷಗಳಿಂದಲೇ ಒತ್ತಾಯಿಸುತ್ತಲೇ ಬಂದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ, ತ್ರೈಮಾಸಿಕ ಕೆಡಿಪಿ ಸಭೆಗಳು, ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಸಭೆಗಳಲ್ಲಿ ಜನಪ್ರತಿನಿಧಿಗಳು ಈ ವಿಷಯ ಪ್ರಸ್ತಾವಿಸುವುದನ್ನು ಬಿಟ್ಟರೆ ಅದರ ಹಿಂದೆ ಹೋಗಿ ಕಡತ ಪಾಸ್ ಮಾಡಿಸುವ ಕಡೆಗೆ ಯಾರೂ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮೇಲ್ಸೇತುವೆ ಯೋಜನೆಯಿತ್ತು!: ಸುರತ್ಕಲ್-ಬಿ.ಸಿ.ರೋಡ್ ಮಧ್ಯೆ 2005ರಲ್ಲಿ ಚತುಷ್ಪಥ ಕಾಮಗಾರಿ ಕೈಗೆತ್ತಿಕೊಂಡಾಗ 2007ರೊಳಗೆ ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವವಿತ್ತು. ಆದರೆ ಸಕಾಲದಲ್ಲಿ ಭೂಸ್ವಾಧೀನವಾಗದೆ ಕಾಮಗಾರಿ ನಡೆಯಲಿಲ್ಲ. ಇದೇ ಕಾರಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಕೈ ಬಿಟ್ಟಿತು. ಬಳಿಕ ಜಿಲ್ಲಾಡಳಿತ ಎಚ್ಚೆತ್ತು ಭೂಸ್ವಾಧೀನ ಮಾಡಿದ್ದರೂ, ಗುತ್ತಿಗೆ ವಹಿಸಿಕೊಂಡಿರುವ ಇರ್ಕಾನ್ ಸಂಸ್ಥೆ ಯೋಜನಾ ವೆಚ್ಚ ದುಪ್ಪಟ್ಟು ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ಹೀಗಾಗಿ ಯೋಜನೆ ಬಾಕಿಯಾಗಿತ್ತು.
ಓವರ್‌ಪಾಸ್ ಬೇಡಿಕೆ: ಮೇಲ್ಸೇತುವೆ ನಂತೂರಿಗೆ ತಾಂತ್ರಿಕವಾಗಿ ಸೂಕ್ತವಾಗುವುದಿಲ್ಲ ಎಂದು ತಜ್ಞರು ನೀಡಿದ ವರದಿಯ ಹಿನ್ನೆಲೆಯಲ್ಲಿ ಇಲ್ಲಿ ಓವರ್‌ಪಾಸ್ ಸೂಕ್ತ ಎಂದು ಲೆಕ್ಕಾಚಾರ ಮಾಡಲಾಯಿತು. ಇದರ ಆಧಾರದಲ್ಲಿ ಓವರ್‌ಪಾಸ್ ಯೋಜನೆಯ 40 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಗೆ 2013ರಲ್ಲಿ ಕಳುಹಿಸಲಾಗಿತ್ತು. ಅಲ್ಲಿಂದ ಈವರೆಗೆ ಅನುಮೋದನೆಯ ನಿರೀಕ್ಷೆ ಈಡೇರಲಿಲ್ಲ.
ನಂತೂರು ಓವರ್‌ಪಾಸ್ ಪ್ರಸ್ತಾವಿತ ಸ್ವರೂಪ: ಮೂಡುಬಿದಿರೆಯಿಂದ ಬಿಕರ್ನಕಟ್ಟೆ ಮೂಲಕ ಬರುವ ವಾಹನಗಳು ನಂತೂರು ಜಂಕ್ಷನ್‌ನಲ್ಲಿ ಹಾಲಿ ಇರುವ ರಸ್ತೆಯಲ್ಲಿಯೇ ಮಂಗಳೂರು ನಗರ ಪ್ರವೇಶ ಮಾಡಲಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಆಗಮಿಸುವ ವಾಹನಗಳು ಪದವು ಹೈಸ್ಕೂಲ್ ಸಮೀಪದಿಂದ ಓವರ್‌ಪಾಸ್‌ನ ಕೆಳಗಿನ ಚತುಷ್ಪಥ ಮೂಲಕ ಸಂದೇಶ ಪ್ರತಿಷ್ಠಾನದವರೆಗೆ ಕೇರಳ ಕಡೆಗೆ ಸಂಚರಿಸುವುದಾಗಿದೆ.
ನಂತೂರು ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಓವರ್‌ಪಾಸ್ ನಿರ್ಮಿಸುವ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಇಲಾಖೆಗೆ ಕಳುಹಿಸಲಾಗಿದೆ. ಭೂಸ್ವಾಧೀನ ಸೇರಿದಂತೆ ಕೆಲವೊಂದು ತಾಂತ್ರಿಕ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ನಡೆಯಬೇಕಿದೆ. ಈ ಬಗ್ಗೆ ಕೇಂದ್ರ ಇಲಾಖೆಯ ಜತೆಗೆ ಚರ್ಚಿಸಲಾಗುವುದು. ಶಿಶುಮೋಹನ್, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-ಮಂಗಳೂರು