

ವಿಕ್ರಮ ನಾಡಿಗೇರ ಧಾರವಾಡ
ಧಾರವಾಡ ನಗರದ ಸುತ್ತಲೂ ಸಾಕಷ್ಟು ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿವೆ. ಆದರೆ ಎಲ್ಲಕ್ಕಿಂತ ಮೊದಲು ಕೈಗಾರಿಕೆಗಳು ಆರಂಭವಾಗಿದ್ದು ಲಕಮನಹಳ್ಳಿಯಲ್ಲಿ. ಹು-ಧಾ ಅವಳಿನಗರ ಮುಖ್ಯ ರಸ್ತೆಯಿಂದ ಕೊಂಚ ದೂರದಲ್ಲೇ ಇರುವ ಈ ಪ್ರದೇಶ ಮಾತ್ರ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಂಡಿಲ್ಲ.
ಲಕಮನಹಳ್ಳಿ ಕೈಗಾರಿಕಾ ಪ್ರದೇಶ ಸುಮಾರು 52 ಎಕರೆ ವಿಸ್ತಾರ ಹೊಂದಿದೆ. ಈ ಪ್ರದೇಶದಲ್ಲಿ ಬಗೆ ಬಗೆಯ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಹಳೇ ಉದ್ಯಮ ಪ್ರದೇಶ ಇದಾಗಿದ್ದರಿಂದ ಕೆಮಿಕಲ್ಸ್, ಆಹಾರ ಸಂಸ್ಕರಣೆ, ಇತ್ಯಾದಿ ಉತ್ಪಾದನೆಗಳು ನಡೆಯುತ್ತಿವೆ. ಆ ಕೈಗಾರಿಕೆಗಳಿಗೆ ಅಗತ್ಯವಾಗಿರುವ ಸೌಲಭ್ಯಗಳು ಮಾತ್ರ ಇಲ್ಲಿ ಇಲ್ಲದಿರುವುದು ಖೇದಕರ ಸಂಗತಿ. ಇಲ್ಲಿನ ಸಮಸ್ಯೆ ಹೇಳುತ್ತ ಹೊರಟರೆ ಪಟ್ಟಿ ಬೃಹತ್ತಾಗಿ ಬೆಳೆಯಲಿದೆ.
ಇಲ್ಲಿನ ಉದ್ಯಮಿಗಳು ಸದ್ಯ ಕೆಐಎಡಿಬಿಗೆ ಕರ ಪಾವತಿ ಮಾಡುತ್ತಿದ್ದಾರೆ. ಇನ್ನೂ ಖಾತಾ ಬದಲಾವಣೆ, ಕೆಜಿಪಿ ಆಗದ ಕಾರಣ ಇ-ಸ್ವತ್ತು ಸಿಗುತ್ತಿಲ್ಲ. ಇದು ಉದ್ಯಮಿಗಳಿಗೆ ದೊಡ್ಡ ತಲೆ ನೋವಾಗಿದೆ. ಅವರು ಉದ್ಯಮ ಬೆಳೆಸಲು ಸಾಲ ಪಡೆಯಬೇಕು. ಅವರ ಜಾಗದ ಮೇಲೆ ಸಾಲ ಪಡೆಯಲು ಇ ಸ್ವತ್ತು ಬೇಕೆ ಬೇಕು. ಹೀಗಾಗಿ ಉದ್ಯಮಿಗಳು ಇಕ್ಕಟ್ಟಿನ ಸ್ಥಿತಿಯಲ್ಲೇ ಉದ್ಯಮ ನಡೆಸುವಂತಾಗಿದೆ.
ಈ ಪ್ರದೇಶ ಇನ್ನೂ ಮಹಾನಗರ ಪಾಲಿಕೆಗೆ ಹಸ್ತಾಂತರವಾಗದೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ವಹಣೆಯಲ್ಲೇ ಇದೆ. ಇದು ಈ ಪ್ರದೇಶಗಳ ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ರಸ್ತೆ, ಗಟಾರು, ತ್ಯಾಜ್ಯ ವಿಲೇವಾರಿ ಹೀಗೆ ಸಾಕಷ್ಟು ಸಮಸ್ಯೆಗಳು ಇಲ್ಲಿನ ಕೈಗಾರಿಕೋದ್ಯಮಗಳಿಗೆ ಕಾಡುತ್ತಿವೆ.
ಕೈಗಾರಿಕಾ ಪ್ರದೇಶ ಎಂದಾದ ಮೇಲೆ ನಿತ್ಯವೂ ಒಂದಲ್ಲ ಒಂದು ರೀತಿ ಕಸ ಉತ್ಪತ್ತಿ ಸಹಜ. ಆದರೆ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಹೀಗಾಗಿ ಇಡೀ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುವಂತಾಗಿದೆ. ಕಸ ವಿಲೇವಾರಿ ಮಾಡಲು ಪಾಲಿಕೆಗೆ ದೂರು ನೀಡಿದರೆ, ಅವರು ಕೆಐಎಡಿಬಿ ಮೇಲೆ ಹಾಕುತ್ತಾರೆ. ಇವರು ಸಹ ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ. ಹೀಗಾಗಿ ಉದ್ಯಮಿಗಳಿಗೆ ಕಸ ವಿಲೇವಾರಿಯೇ ತಲೆ ನೋವಾಗಿದೆ.
ಇಲ್ಲಿ ರಸ್ತೆಗಳ ಸ್ಥಿತಿಯಂತೂ ಹೇಳ ತೀರದು. ನಿತ್ಯ ಬೃಹತ್ ವಾಹನಗಳು ಓಡಾಡುತ್ತಿದ್ದರೂ ರಸ್ತೆಗಳು ಹೇಳುವಂತಹ ಅಭಿವೃದ್ಧಿ ಕಂಡಿಲ್ಲ. ಕೆಲ ದಿನಗಳ ಹಿಂದೆಷ್ಟೇ ರಸ್ತೆ ಮಾಡಿದ್ದರೂ ಮಳೆಗೆ ಹಾಳಾಗಿವೆ. ಸತತ ಮಳೆಯಾದರೆ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗುತ್ತಿದೆ. ರಾತ್ರಿ ಸಮಯದಲ್ಲಿ ನಿರ್ಭಯವಾಗಿ ಓಡಾಡದಂತಹ ಸ್ಥಿತಿ ಇದೆ. ಬಹುತೇಕ ರಸ್ತೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲ.
ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಕೂಡಿರುವ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಬೇಕಿದೆ. ಬರೀ ಕೈಗಾರಿಕೆ ತರುತ್ತೇವೆ ಎಂದು ಹೇಳಿದರೆ ಸಾಲದು. ಕೈಗಾರಿಕೆ ಸ್ಥಾಪನೆಗೆ ಏನೆಲ್ಲ ಸೌಲಭ್ಯ ನೀಡಬೇಕು ಎಂಬ ಕಲ್ಪನೆ ಇದ್ದಾಗ ಮಾತ್ರ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ.
ನಮ್ಮ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲವಾಗಿ ಇಲ್ಲಿನ ನಿವೇಶನಗಳು ಕೆಐಎಡಿಬಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹಸ್ತಾಂತರವಾಗಿಲ್ಲ. ಇದರಿಂದ ಕರ ತುಂಬುವುದು, ತ್ಯಾಜ್ಯ ವಿಲೇವಾರಿ, ರಸ್ತೆಗಳ ಅಭಿವೃದ್ಧಿ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಬೃಹತ್ ಕೈಗಾರಿಕೆಗಳಿವೆ. ಹೀಗಾಗಿ ವಿಶೇಷ ಅನುದಾನ ಮೂಲಕ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಆಗಬೇಕಿದೆ.*ನಾಗರಾಜ ಯಲಿಗಾರ, ಲಕಮನಹಳ್ಳಿ ಕೈಗಾರಿಕಾ ಪ್ರದೇಶ ಸಂಘದ ಅಧ್ಯಕ್ಷ