ಪ್ರತಿ ವರ್ಷ ಬೆಳೆ ಸಮೀಕ್ಷೆ ಬೇಡ: ಬಡಗನ್ನೂರು ಪಂಚಾಯಿತಿ ಸದಸ್ಯರ ಸಲಹೆ

Published on

ಪುತ್ತೂರು ಗ್ರಾಮಾಂತರ: ದ.ಕ.ಜಿಲ್ಲೆಯಲ್ಲಿ ಅಡಿಕೆ, ತೆಂಗು, ರಬ್ಬರ್, ಗೇರು ಕೃಷಿ ಸಾಮಾನ್ಯವಾಗಿದ್ದು, ಈ ಕೃಷಿಗಳಲ್ಲಿ ವರ್ಷಕ್ಕೊಮ್ಮೆ ಯಾವುದೇ ಬದಲಾವಣೆಯಾಗುವುದಿಲ್ಲ. ಪ್ರತಿ ವರ್ಷ ಬೆಳೆ ಸಮೀಕ್ಷೆ ನಡೆಸುವ ಕ್ರಮದಿಂದಾಗಿ ರೈತರಿಗೆ ಸಾಲ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಹಾಗಾಗಿ ಒಂದು ಬಾರಿ ಬೆಳೆ ಸಮೀಕ್ಷೆ ನಡೆಸಿ ನಮೂದಿಸುವ ಕೆಲಸ ಆಗಬೇಕು ಎಂದು ಬಡಗನ್ನೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಬಡಗನ್ನೂರು ಗ್ರಾಪಂ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ರವಿರಾಜ್ ರೈ ಸಜಂಕಾಡಿ, ಕಂದಾಯ ಇಲಾಖೆ ಪ್ರತಿ ವರ್ಷ ಬೆಳೆ ಸಮೀಕ್ಷೆ ನಡೆಸುತ್ತಿರುವುದರಿಂದ ಇಲ್ಲಿನ ರೈತರು ಸಾಲ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಗ್ರಾಮಾಡಳಿತಾಧಿ ಕಚೇರಿಗೆ ಅಲೆದಾಡುವ ಪ್ರಮೇಯ ಎದುರಾಗುತ್ತಿದೆ. ಇಲ್ಲಿನ ಅಡಕೆ, ತೆಂಗು, ರಬ್ಬರ್, ಗೇರು, ಕರಿಮೆಣಸು ಕೃಷಿಗಳಲ್ಲಿ ಪ್ರತಿ ವರ್ಷ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಒಂದು ಬಾರಿ ಬೆಳೆ ಸಮೀಕ್ಷೆ ನಡೆಸಿ ನಮೂದಿಸುವ ಕೆಲಸವಾದರೆ ರೈತರಿಗೆ ಪ್ರಯೋಜನವಾಗುತ್ತದೆ. ಪ್ರತಿ ವರ್ಷ ಸಮೀಕ್ಷೆ ನಡೆಸುವುದು ಮತ್ತು ರೈತರು ಅಲೆದಾಡುವುದು ತಪ್ಪುತ್ತದೆ ಎಂದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳಿಗೆ ಬರೆದುಕೊಳ್ಳುವುದು ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ ಸಂತೋಷ್ ಆಳ್ವ ಗಿರಿಗದ್ದೆ, ಲಿಂಗಪ್ಪ ಗೌಡ ಮೋಡಿಕೆ, ವಸಂತ ಗೌಡ ಕನ್ನಾಯ, ಕುಮಾರ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ, ಕಲಾವತಿ ಪಟ್ಲಡ್ಕ, ವೆಂಕಟೇಶ್ ಕನ್ನಡ್ಕ, ಧರ್ಮೇಂದ್ರ ಕುಲಾಲ್ ಪದಡ್ಕ, ಹೇಮಾವತಿ ಮೋಡಿಕೆ, ಸುಜಾತಾ ಮೈಂದನಡ್ಕ, ಜ್ಯೋತಿ ಅಂಬಟೆಮೂಲೆ, ದಮಯಂತಿ ಕೆಮನಡ್ಕ, ಸವಿತಾ ನೇರೋಳ್ತಡ್ಕ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವಸೀಂ ಗಂಧದ್ ಸ್ವಾಗತಿಸಿ ವಂದಿಸಿದರು.

ನಿವೇಶನ ಜಾಗಕ್ಕೆ ರಸ್ತೆ ಸಮಸ್ಯೆ

ಪಡುವನ್ನೂರು ಗ್ರಾಮದ ಪಿಲಿಪಂಜರ ಎಂಬಲ್ಲಿ ನಿವೇಶನಕ್ಕೆ ಕಾದಿರಿಸಿರುವ ಪಂಚಾಯಿತಿ ಜಾಗಕ್ಕೆ ಹೋಗಲು ರಸ್ತೆ ವ್ಯವಸ್ಥೆಯಿಲ್ಲ. ಸುತ್ತಲೂ ಕೃಷಿ ಭೂಮಿ ಇದ್ದು, ಅಲ್ಲಿನ ಭೂಮಾಲೀಕರೊಂದಿಗೆ ನಿವೇಶನ ಜಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯಿತಿ ವತಿಯಿಂದ ಮಾತುಕತೆ ನಡೆಸಿದ್ದರೂ ಫಲಕಾರಿಯಾಗಿಲ್ಲ. ನಿವೇಶನಕ್ಕೆ ಅರ್ಜಿ ಸಲ್ಲಿಸಿರುವವರು ಬಹಳಷ್ಟು ಮಂದಿ ಇದ್ದರೂ ನಿವೇಶನಕ್ಕೆ ಕಾದಿರಿಸಿರುವ ಜಾಗಕ್ಕೆ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ನಿವೇಶನ ಹಂಚಿಕೆಗೆ ತೊಡಕಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ಬರೆದುಕೊಳ್ಳಬೇಕು ಎಂದು ರವಿರಾಜ್ ರೈ ಸಜಂಕಾಡಿ ಆಗ್ರಹಿಸಿದರು. ಈ ಬಗ್ಗೆ ಚರ್ಚಿಸಿ ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಸಮಸ್ಯೆ ಪರಿಹಾರಕ್ಕಾಗಿ ತಹಸೀಲ್ದಾರರಿಗೆ ಬರೆದುಕೊಳ್ಳುವುದೆಂದು ನಿರ್ಣಯ ಅಂಗೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net