ಹೊಸ ಕೋವಿಡ್ ಪ್ರಕರಣ ಇಲ್ಲ

corona
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಹೊಸ ಕೋವಿಡ್ ಪ್ರಕರಣ ವರದಿಯಾಗಿಲ್ಲ.

178 ಮಂದಿಯನ್ನು ಸ್ಕ್ರೀನಿಂಗ್‌ಗೊಳಪಡಿಸಿದ್ದು ಎನ್‌ಐಟಿಕೆಯಲ್ಲಿ 60, ಇಎಸ್‌ಐ ಆಸ್ಪತ್ರೆಯಲ್ಲಿ 40 ಮಂದಿ ನಿಗಾವಣೆಯಲ್ಲಿದ್ದಾರೆ. ಲ್ಯಾಬ್ ಪರೀಕ್ಷಾ ಪ್ರಮಾಣವೂ ಏರುಗತಿಯಲ್ಲಿದ್ದು, ಈವರೆಗೆ 3560 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ, 2994 ಸ್ಯಾಂಪಲ್ ವರದಿ ಸಿಕ್ಕಿದೆ.

ಶನಿವಾರ ಬಂದಿರುವ ಎಲ್ಲ 355 ಪರೀಕ್ಷಾ ವರದಿಗಳೂ ನೆಗೆಟಿವ್ ಆಗಿವೆ. 396 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 5 ಮಂದಿಯನ್ನು ಆಸ್ಪತ್ರೆಗೆ ನಿಗಾ ಇರಿಸುವುದಕ್ಕಾಗಿ ದಾಖಲಿಸಲಾಗಿದೆ. ಫೀವರ್ ಕ್ಲಿನಿಕ್‌ಗಳಲ್ಲಿ ಈವರೆಗೆ 2172 ಮಂದಿಯ ತಪಾಸಣೆ ನಡೆಸಲಾಗಿದ್ದರೆ 18 ಮಂದಿ ತೀವ್ರ ಉಸಿರಾಟ ತೊಂದರೆಯೊಂದಿಗೆ ಪತ್ತೆಯಾಗಿದ್ದಾರೆ. ಮೊಬೈಲ್ ಫೀವರ್ ಕ್ಲೀನಿಕ್‌ಗಳಲ್ಲಿ 233 ಮಂದಿಯ ತಪಾಸಣೆ ಕೈಗೊಂಡಿದೆ.

ತೀವ್ರ ಉಸಿರಾಟದ ತೊಂದರೆ ಅಥವಾ ಜ್ವರ ಇದ್ದಲ್ಲಿ ಫೀವರ್ ಕ್ಲಿನಿಕ್‌ಗಳಲ್ಲಿ ಜನರು ಪರೀಕ್ಷಿಸಿಕೊಳ್ಳಬಹುದು. ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಲ್ಲಿ ಸಂಬಂಧಿಸಿದ ಆಸ್ಪತ್ರೆ ಮುಖ್ಯಸ್ಥರು ಅಥವಾ ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಲು ಸೂಚಿಸಿದೆ.

ಮತ್ತೊಂದು ಕಂಟೈನ್‌ಮೆಂಟ್ ವಲಯ ರದ್ದು

ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣ ವರದಿಯಾಗದ ಹಿನ್ನೆಲೆಯಲ್ಲಿ ತೊಕ್ಕೊಟ್ಟುವಿನ ಕಂಟೈನ್‌ಮೆಂಟ್ ವಲಯವನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಕರೊನಾ ಪಾಸಿಟಿವ್ ರೋಗಿ ಪತ್ತೆಯಾದ ಹಿನ್ನೆಲೆಯಲ್ಲಿ ಉಳ್ಳಾಲ ಪುರಸಭೆ ವ್ಯಾಪ್ತಿಯ ಸ್ಮಾರ್ಟ್‌ಸಿಟಿ ಸ್ಮಾರ್ಟ್ ಪ್ಲಾನೆಟ್ ಅಪಾರ್ಟ್‌ಮೆಂಟ್‌ನ್ನು ಕಂಟೈನ್‌ಮೆಂಟ್ ವಲಯವಾಗಿ ಈ ಮೊದಲು ಘೋಷಿಸಲಾಗಿತ್ತು.

ಸದ್ಯ 8 ಕಂಟೈನ್‌ಮೆಂಟ್ ವಲಯಗಳು

ನಂ.4 ಪುತ್ತೂರು ತಾಲೂಕು ಸಂಪ್ಯ ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-106), ನಂ.5 ಬಂಟ್ವಾಳದ ತುಂಬೆ ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-143), ನಂ 7 ಪುತ್ತೂರು ಉಪ್ಪಿನಂಗಡಿ ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-325, ಪಿ-389), ನಂ 8 ಬಂಟ್ವಾಳ ತಾಲೂಕು ಕಸ್ಬಾ ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-390, ಪಿ-409, ಪಿ-489, ಪಿ-578), ನಂ 9 ಮಂಗಳೂರು ತಾಲೂಕು ಪಡೀಲಿನ ಫಸ್ಟ್‌ನ್ಯೂರೊ ಆಸ್ಪತ್ರೆ(ಪಿ-432), ನಂ 10 ಬಂಟ್ವಾಳ ನರಿಕೊಂಬು ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-501), ನಂ 11 ಮಂಗಳೂರು ತಾಲೂಕು ಪದವಿನ ಕಕ್ಕೆಬೆಟ್ಟು ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-506, ಪಿ-507),ನಂ 12 ಮಂಗಳೂರು ತಾಲೂಕು ಬೋಳೂರು ಗ್ರಾಮದ ನಿರ್ದಿಷ್ಟ ಪ್ರದೇಶ(ಪಿ-536, ಪಿ-579)

11 ಮಂದಿಯ ವರದಿ ನೆಗೆಟಿವ್

ಉಡುಪಿ: ಜಿಲ್ಲಾಡಳಿತ ಶನಿವಾರ ಸ್ವೀಕರಿಸಿದ ಎಲ್ಲ 11 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 4 , ಇಲ್‌ನೆಸ್‌ಗೆ ಸಂಬಂಧಿಸಿ 7, ಕೋವಿಡ್-19 ಸಸ್ಪೆಕ್ಟ್ 2, ಹಾಟ್‌ಸ್ಪಾಟ್ ಜಿಲ್ಲೆಯಿಂದ ಬಂದ ಒಬ್ಬರು ಸೇರಿದಂತೆ ಒಟ್ಟು 14 ಮಂದಿಯ ಮಾದರಿಯನ್ನು ಶನಿವಾರ ಸಂಗ್ರಹಿಸಲಾಗಿದೆ. 12 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 50 ಮಂದಿಯ ವರದಿ ಬರಲು ಬಾಕಿ ಇದೆ. ಶನಿವಾರ 65 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕಾಸರಗೋಡಲ್ಲಿ ಹೊಸ ಪ್ರಕರಣವಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರವೂ ಕೋವಿಡ್-19 ಹೊಸ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 1734 ಮಂದಿ ಮನೆಗಳಲ್ಲಿ ಹಾಗೂ 30 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶನಿವಾರ ಎಂಟು ಮಂದಿಯನ್ನು ಹೊಸದಾಗಿ ಐಸೋಲೇಷನ್‌ಗೆ ಸೇರ್ಪಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದವರ ಪೈಕಿ 171 ಮಂದಿ ಗುಣಮುಖರಾಗಿದ್ದು, ಏಳು ಮಂದಿ ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೇರಳ ರಾಜ್ಯದಲ್ಲಿ ಎರಡು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೇರಳದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮದ್ಯ ಮಾರಾಟವನ್ನು ಸರ್ಕಾರ ನಿಷೇಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net