ಕೇಣಿ ವಾಣಿಜ್ಯ ಬಂದರು ನಿರ್ಮಾಣ ಬೇಡ

22ANKOLA1
Published on

ಅಂಕೋಲಾ: ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಪಟ್ಟಣದಲ್ಲಿ ಮೀನುಗಾರರು ಮಂಗಳವಾರ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್‌ಗೆ ಮೀನು ಮಾರಾಟ ಮಾಡುವ ಬುಟ್ಟಿಯಲ್ಲಿ ಸಾವಿರ ಪ್ರತಿಗಳ ಮನವಿ ಸಲ್ಲಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಜನರಿಗೆ ಬೇಡವಾದ ಬಂದರು ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಇಷ್ಟ್ಟೆೆಲ್ಲ ವಿರೋಧವಿದ್ದರೂ ಬಂದರು ನಿರ್ಮಿಸುವುದಾದರೆ ಜನರ ಸಾಮೂಹಿಕ ಸಮಾಧಿ ಮೇಲೆ ನಿರ್ಮಿಸಲಿ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾಗುತ್ತದೆ. ಇಲ್ಲಿನ ಮೀನುಗಾರರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದ್ದು, ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದರು.

ಹೋರಾಟದ ನೇತೃತ್ವ ವಹಿಸಿದ್ದ ಎಂಎಲ್ಸಿ ಗಣಪತಿ ಉಳ್ವೇಕರ ಮಾತನಾಡಿ, ಕೇಣಿಯಲ್ಲಿ ನಿರ್ಮಿಸುವ ವಾಣಿಜ್ಯ ಬಂದರನ್ನು ಇಡೀ ಜಿಲ್ಲೆಯ ಮೀನುಗಾರ ಸಮುದಾಯ ವಿರೋಧಿಸುತ್ತದೆ. ಕಾರವಾರದಲ್ಲಿ ಬಂದರು ಇಲಾಖೆಯ ವಾಣಿಜ್ಯ ಬಂದರು ಇದೆ. ಸಾಕಷ್ಟು ಪ್ರಮಾಣದಲ್ಲಿ ರಫ್ತು ಉದ್ಯಮ ನಡೆಸಲು ಅವಕಾಶಗಳಿವೆ. ಆದರೂ ಕೇಣಿಯಲ್ಲಿ ಮತ್ತೊಂದು ಖಾಸಗಿ ಬಂದರು ನಿರ್ಮಿಸುವ ಅಗತ್ಯ ಇದೆಯೇ. ಸರ್ಕಾರ ಬಂದರು ನಿರ್ಮಾಣ ಯೋಜನೆ ಹಿಂಪಡೆದು ಮೀನುಗಾರಿಕೆ ಉಳಿಸಬೇಕು ಎಂದರು.

ಬಂದರು ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ದುರ್ಗೇಕರ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ಒಂದು ಸಾವಿರಕ್ಕೂ ಹೆಚ್ಚು ಮನವಿಗಳನ್ನು ನೀಡುತ್ತಿದ್ದೇವೆ. ಇದಕ್ಕೂ ಮನ್ನಣೆ ಸಿಗದಿದ್ದಲ್ಲಿ ಮುಂದೆ ತೀವ್ರ ಹೋರಾಟ ಮಾಡುತ್ತೇವೆ ಎಂದರು.

ಬಂದರು ವಿರೋಧಿ ಹೋರಾಟದ ಪ್ರಮುಖ ಸಂಜೀವ ಬಲೇಗಾರ ಮಾತನಾಡಿ, ಸರ್ಕಾರ ಮತ್ತು ಜೆಎಸ್‌ಡಬ್ಲುೃ ಕಂಪನಿಗಳು ಮೀನುಗಾರರ ವಿರೋಧ ಕಡೆಗಣಿಸಿ ವಾಮಮಾರ್ಗದಲ್ಲಿ ಬಂದರು ನಿರ್ಮಿಸಲು ಹವಣಿಸುತ್ತಿದೆ. ಕಾಟಾಚಾರಕ್ಕೆ ಸಾರ್ವಜನಿಕ ಅಹವಾಲು ಸಭೆ ನಡೆಸುವ ಹುನ್ನಾರ ನಡೆಸಿದೆ. ಇದ್ಯಾವುದಕ್ಕೂ ಮೀನುಗಾರರು ಜಗ್ಗುವುದಿಲ್ಲ ಎಂದರು.

ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಮನವಿ ಸ್ವೀಕರಿಸಿದರು. ಶ್ರೀಕಾಂತ ದುರ್ಗೇಕರ, ರಾಜು ಹರಿಕಂತ್ರ, ಪ್ರಮೋದ ಭಾನಾವಳಿಕರ, ಹುವಾ ಖಂಡೇಕರ, ಸುಂದರ ಖಾರ್ವಿ, ಪಾಂಡು ಗೌಡ, ಗಿರೀಶ ಹರಿಕಂತ್ರ, ಮಂಜುನಾಥ ಕೇಣಿಕರ, ಜಾನೂ ಹರಿಕಂತ್ರ, ಮಂಜುನಾಥ ಟಾಕೇಕರ, ಉದಯ ನಾಯಕ, ಸಂದೀಪ ಬಂಟ, ರಾಜೇಶ್ವರಿ ಕೇಣಿಕರ, ಶೋಭಾ ನಾಯ್ಕ ಸೇರಿದಂತೆ ಸಾವಿರಾರು ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಎಸ್ಪಿ ಜಗದೀಶ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಿರೀಶ, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಉದ್ದಪ್ಪ ಧರೆಪ್ಪನವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಉಸ್ತುವಾರಿ ಸಚಿವರಿಗೆ ಧಿಕ್ಕಾರ

ಕೇಣಿ ಬಂದರು ವಿರೋಧಿ ಹೋರಾಟಗಾರರು ಪ್ರತಿಭಟನೆ ನಡೆಸಿ ಮನವಿಯನ್ನು ಸ್ವೀಕರಿಸಲು ಉಸ್ತುವಾರಿ ಮಂತ್ರಿ ಬರಬೇಕೆಂದು ಆಗ್ರಹಿಸಿದ್ದರು. ಆದರೆ, ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಅವರು ಅಂಕೋಲಾದ ಶಿರೂರು, ಕಾರವಾರ ಪ್ರವಾಸದಲ್ಲಿದ್ದು, ಉಸ್ತುವಾರಿ ಮಂತ್ರಿಗಳೂ ಅವರ ಜತೆ ಇದ್ದುದರಿಂದ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೇಟಿಗಾಗಿ ಕಾದಿ ದ್ದರು. ಈ ವೇಳೆ ಆಗಮಿಸಿದ ಕಂದಾಯ ಮಂತ್ರಿಗಳು ಕಾರಿನಿಂದಿಳಿದು ಮೀನುಗಾರರ ಸಮಸ್ಯೆಯನ್ನು ಆಲಿಸಿ ಮನವಿ ಸ್ವೀಕರಿಸಿದರು. ಮುಖ್ಯಮಂತ್ರಿ ಜತೆ ಮಾತನಾಡುವುದಾಗಿಯೂ ಭರವಸೆ ನೀಡಿದರು. ಆದರೆ, ಸ್ವತಃ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಕಾರಿನಿಂದಿಳಿಯದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದು ಮೀನುಗಾರರ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಅವರಿಗೆ ಧಿಕ್ಕಾರ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net