

ಹೊನ್ನಾವರ: ತಾಲೂಕಿನ ನವಿಲಗೋಣದ ಶ್ರೀ ನಂದಿಕೇಶ್ವರ ದೇವಾಲಯದ ಎದುರಲ್ಲಿ ಸರ್ಕಾರವು ಯಾವುದೇ ಕಾರಣಕ್ಕೂ ಸ್ಮಶಾನ ನಿರ್ವಿುಸಬಾರದು ಎಂದು ಸ್ಥಳೀಯರು ತಾಲೂಕು ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ನವಿಲಗೋಣ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.334/ಬ11 ರಲ್ಲಿ 20 ಗುಂಟೆ ಕ್ಷೇತ್ರವನ್ನು ಜಿಲ್ಲಾಧಿಕಾರಿಗಳು ಸ್ಮಶಾನಕ್ಕಾಗಿ ಕಾಯ್ದಿರಿಸಿ ಆದೇಶಿಸಿದ್ದು, ಈ ಆದೇಶವನ್ನು ಹಿಂಪಡೆಯಬೇಕು. ಯಾವುದೇ ಕಾಮಗಾರಿ ಮಾಡದಂತೆ ತಾಲೂಕು ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನವಿಲಗೋಣದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗದ ಎದುರಲ್ಲೇ ಶ್ರೀ ನಂದಿಕೇಶ್ವರ ದೇವಾಲಯವಿದ್ದು, ಗ್ರಾಮದ ಆರಾಧ್ಯ ದೈವವಾಗಿದೆ. ಈ ಕ್ಷೇತ್ರಕ್ಕೆ ಗ್ರಾಮದ ಭಕ್ತರಷ್ಟೇ ಅಲ್ಲದೆ, ಪುತ್ತೂರು, ಮಂಗಳೂರು, ಕಾಸರಗೋಡು ಸೇರಿ ಪರ ಊರಿನ ಭಕ್ತರೂ ಈ ದೇವರನ್ನು ತಮ್ಮ ಕುಲದೇವರೆಂದು ನಂಬಿ ಆಗಾಗ ಭೇಟಿ ನೀಡಿ, ಆರಾಧಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲೇ ಅನೇಕ ಧಾರ್ವಿುಕ ಕಾರ್ಯಕ್ರಮಗಳು, ಬಲಿ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ. ಈ ಎಲ್ಲ ಉತ್ಸವಾದಿಗಳಿಗೆ ಇದೇ ಜಾಗವಾಗಿರುವ ಹಾಡಿ ಬೆಟ್ಟದಿಂದ ಬಲಿ ಸೊಪ್ಪು ಹಾಗೂ ಅಗತ್ಯ ಗಿಡಗಂಟಿಗಳನ್ನು ಬಳಸಲಾಗುತ್ತದೆ. ಇದೀಗ ಜಿಲ್ಲಾಧಿಕಾರಿಗಳ ಆದೇಶದಂತೆ ದೇವಸ್ಥಾನದ ಎದುರಿನಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಾಣ ಮಾಡುವುದರಿಂದ ದೇವಾಲಯಕ್ಕೆ ಬರುವ ಭಕ್ತರ ಭಾವನೆಗಳಿಗೆ ಹಾಗೂ ದೇವಸ್ಥಾನದ ಪಾವಿತ್ರ್ಯೆಗೂ ಧಕ್ಕೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗವು ದೇವಾಲಯದಿಂದ ಕೇವಲ 80 ಮೀಟರ್ ಅಂತರದಲ್ಲಿದೆ. ಒಂದು ಗ್ರಾಪಂ ವ್ಯಾಪ್ತಿಗೆ ಒಂದು ಸ್ಮಶಾನ ಎಂಬ ನಿಯಮ ಇರುವುದರಿಂದ ಈಗ ಗುರುತಿಸಲ್ಪಟ್ಟ ಜಾಗವನ್ನು ಇದೇ ಊರಿನ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಎಲ್ಲಾ ರೀತಿಯ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಈ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ ದೇವಾಲಯದ ಎದುರು ಸ್ಮಶಾನ ನಿರ್ವಣವಾದಲ್ಲಿ ದೇವಾಲಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ದೇವಾಲಯದ ಆದಾಯದ ಮೇಲೂ ಪರಿಣಾಮ ಬೀರಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಧಿಕಾರಿಗಳು ದೇವಾಲಯದ ಎದುರಲ್ಲಿ ಗುರುತುಪಡಿಸಿದ ಸ್ಮಶಾನ ಜಾಗದ ಆದೇಶ ಹಿಂಪಡೆದು ಬೇರೆಡೆ ಸ್ಥಳಾಂತರ ಮಾಡಿ ಭಕ್ತರ ಭಾವನೆಗಳನ್ನು ಕಾಪಾಡಬೇಕು ಎಂದು ನವಿಲಗೋಣದ ಉಮೇಶ ಗೋಪಾಲ ಶೇಟ್, ಶಿವಾನಂದ ಗಣಪತಿ ಭಂಡಾರಿ, ಮಂಜುನಾಥ ಮಾಬ್ಲೇಶ್ವರ ಹೆಗಡೆ, ಶ್ರೀಧರ ಗಣಪತಿ ಭಂಡಾರಿ, ರಾಘು ಸುಬ್ರಾಯ ಭಂಡಾರಿ, ಸರಸ್ವತ ದತ್ತಾತ್ರಯ ಭಟ್ಟ, ವಿಜಯ ರಾಮಕೃಷ್ಣ ಸೇಟ್, ದತ್ತಾತ್ರಯ ಮಡಿವಾಳ, ಸೂರಜ್ ಸೇಟ್, ಗೌರಿ ವಿನಾಯಕ ಶೇಟ್ ಇತರರು ಆಗ್ರಹಿಸಿದ್ದಾರೆ.