ಗ್ರಾಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಸೋಲು

8 UPBR 3
Published on

ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ತಿದಿ ಅವರ ವಿರುದ್ಧ ಸದಸ್ಯರು ಬುಧವಾರ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಇಬ್ಬರು ಸದಸ್ಯರ ಗೈರು ಹಾಜರಾತಿಯಿಂದ ಸೋಲಾಯಿತು.

ಅಮ್ಮಿನಬಾವಿ ಗ್ರಾಮ ಪಂಚಾಯಿತಿಯು ಒಟ್ಟು 31 ಸದಸ್ಯರ ಬಲ ಹೊಂದಿದ್ದು, ಇದರ ಪೈಕಿ 12 ಸದಸ್ಯರು ಅಧ್ಯಕ್ಷರ ಪರವಾಗಿದ್ದರು. ಅವಿಶ್ವಾಸ ಗೊತ್ತುವಳಿ ವಿರುದ್ಧ ಮೂರನೇ ಎರಡರಷ್ಟು, ಅಂದರೆ 21 ಸದಸ್ಯರ ಸಂಖ್ಯಾ ಬಲದ ಅಗತ್ಯವಿತ್ತು. 19 ಜನ ಸದಸ್ಯರು ಮಾತ್ರ ಮತ ಚಲಾಯಿಸಿದರು. ಹೀಗಾಗಿ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಯಿತು.

ನಂತರ ಗ್ರಾಪಂ ಅಧ್ಯಕ್ಷೆ ನೀಲವ್ವ ತಿದಿ ಬೆಂಬಲಿಗರು ಗ್ರಾಪಂ ಆವರಣದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

ಧಾರವಾಡ ಉಪ ವಿಭಾಗಾಧಿಕಾರಿ ಶಾಲಮ್ ಹುಸೇನ, ತಾಲೂಕು ಪಂಚಾಯಿತಿ ಇಒ ಗಂಗಾಧರ ಕಂದಕೂರ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಡಿವೈಎಸ್‌ಪಿ ಎಸ್.ಎನ್. ನಾಗರಾಜ, ಧಾರವಾಡ ಗ್ರಾಮೀಣ ಸಿಪಿಐ ಶಿವಾನಂದ ಕಮತಿ, ಪಿಎಸ್‌ಐ ಭಾರತಿ ಬಂಕಾಪೂರ, ಪಿಡಿಒ ಬಿ.ಡಿ. ಚವರಡ್ಡಿ, ರಾಕೇಶ ನಾಝರೆ, ವಿಠ್ಠಲ ಬಾಚಗುಂಡಿ, ಮಡಿವಾಳಪ್ಪ, ಸಿದ್ದಪ್ಪ ತಿದಿ, ಕಿರಣ ಜಾಧವ, ಮಹೇಶ ಕೋಳಿವಾಡ, ಮೌನೇಶ ಪತ್ತಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net