

ಮಡಿಕೇರಿ:
ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸ್ಪಷ್ಟಪಡಿಸಿದ್ದಾರೆ. ವೀರಾಜಪೇಟೆ ತಾಲೂಕಿನ ಬೊಳ್ಳುಮಾಡು ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯೋಜನೆಗಾಗಿ ಈಗಾಗಲೇ ೫೬ ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಯೋಜನೆ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ ಸುತಾರಾಂ ಒಪ್ಪುವುದಿಲ್ಲ. ಯೋಜನೆ ಶ್ರೀಮಂತರಿಗೆ ಬೇಡ ಎಂದು ಕೆಲವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಜತೆ ಚರ್ಚಿಸಿದ್ದಾರೆ. ಶ್ರೀಮಂತರಿಗೆ ಈ ಯೋಜನೆ ನಿಲ್ಲಿಸಿದರೆ ೨೦ ಸಾವಿರ ಕೋಟಿ ರೂ. ಉಳಿತಾಯ ಆಗಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದನ್ನು ಸಿದ್ದರಾಮಯ್ಯ ಒಪ್ಪುವುದಿಲ್ಲ. ಇಡೀ ದೇಶದಲ್ಲಿಯೇ ಜನರಿಗಾಗಿ ಇಂಥ ಯೋಜನೆ ಜಾರಿ ಮಾಡಿರುವುದು ಕಾಂಗ್ರೆಸ್ ಮಾತ್ರ. ಹೀಗಾಗಿ ಯಾರು ಏನೇ ಹೇಳಿದರೂ ಯೋಜನೆ ನಿಲ್ಲುವುದಿಲ್ಲ ಎಂದರು.
ನನ್ನ ಮೇಲಿನ ದ್ವೇಷಕ್ಕೆ ಹೆಚ್‌ಎಂಟಿ ಜಾಗ ವಾಪಸ್ ಪಡೆಯಲಾಗುತ್ತಿದೆ ಎನ್ನುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಬೋಸರಾಜು, ಅರಣ್ಯ ಭೂಮಿ ಒತ್ತುವರಿ ಮಾಡಿರುವುದರ ತೆರವಿಗೆ ಅರಣ್ಯ ಸಚಿವರು ಸೂಚಿಸಿದ್ದಾರೆ. ಎಲ್ಲೆಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿದೆಯೋ ಅಲ್ಲಿ ಕ್ರಮ ಆಗುತ್ತದೆ. ಸಮಸ್ಯೆ ಬಂದರೆ ಅದನ್ನು ಸರ್ಕಾರ ನಿಭಾಯಿಸುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಐವರು ಸಚಿವರನ್ನು ಬದಲಾವಣೆ ಮಾಡಲಾಗುವುದು ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿ, ಅದೆಲ್ಲಾ ಸುಳ್ಳು. ಇಂಥ ಯಾವುದೇ ಚರ್ಚೆಗಳು ಸಂಪುಟದಲ್ಲಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.