ಗುಲ್ಬರ್ಗ ವಿವಿಗೆ ಗ್ರಹಣ, ಕುಲಪತಿ ಇಲ್ಲದೆ ಭಣಭಣ: 175 ಉಪನ್ಯಾಸಕರ ಹುದ್ದೆ ಖಾಲಿ

Gulberga VV
Published on

ಕಲಬುರಗಿ: ಕುಲಪತಿ ಇಲ್ಲ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇಲ್ಲ, ಅನುದಾನ ಬರುತ್ತಿಲ್ಲ, ಅತಿಥಿ ಉಪನ್ಯಾಕರು, ಹೊರಗುತ್ತಿಗೆ ನೌಕರರೇ ಆಧಾರ. ಇದು ಉನ್ನತ ಶಿಕ್ಷಣ ಕೇಂದ್ರವೂ ಆದ ಗುಲ್ಬರ್ಗ ವಿಶ್ವವಿದ್ಯಾಲಯದ ಶೋಚನೀಯ ಸ್ಥಿತಿ. ಕಲ್ಯಾಣ ಕರ್ನಾಟಕದ ಗುಲ್ಬರ್ಗ ವಿಶ್ವವಿದ್ಯಾಲಯವನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿರುವುದೇ ಈ ಸ್ಥಿತಿಗೆ ಕಾರಣ. ಕುಲಪತಿ ಅವಧಿ ಮುಗಿದು 8-10 ತಿಂಗಳಾಗಿದೆ. ಈಗೇನಿದ್ದರೂ ಹಿರಿಯ ಡೀನ್​ಗಳ ಸಾರಥ್ಯದಲ್ಲಿ ಆಡಳಿತ ಚಟುವಟಿಕೆ ನಡೆದಿವೆ.

ಸಿಬ್ಬಂದಿ ಕೊರತೆ: ಉನ್ನತ ಶಿಕ್ಷಣ ವಿದ್ಯಾಕೇಂದ್ರಕ್ಕೆ ನಾಯಕನೇ ಇಲ್ಲವೆಂದಾದರೆ ವಾರ್ಷಿಕ ಶೈಕ್ಷಣಿಕ ಚಟುವಟಿಕೆಯಲ್ಲಿ ಏರುಪೇರಾಗಲಿದೆ. ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಹೀಗೆ ಎಲ್ಲ ಹಂತದಲ್ಲೂ ತೊಂದರೆ ಎದುರಾಗುತ್ತಿದೆ. ಶೈಕ್ಷಣಿಕ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪೂರ್ಣಪ್ರಮಾಣದ ಕುಲಪತಿ ಇಲ್ಲದಿದ್ದಲ್ಲಿ ಸಿಬ್ಬಂದಿ ಕಾರ್ಯಕ್ಷಮತೆಯಲ್ಲೂ ಏರಿಳಿತ ಕಂಡುಬರಲಿದೆ. ವಿವಿಯಲ್ಲಿ 175 ಭೋದಕ ಮತ್ತು 300 ಭೋದಕೇತರ ಹುದ್ದೆ ಖಾಲಿ ಇದ್ದು, ಬಹುತೇಕ ವಿಭಾಗಗಳು ಅತಿಥಿ ಶಿಕ್ಷಕರನ್ನೇ ಅವಲಂಬಿಸಿವೆ.

ಸಿಗದ ನ್ಯಾಕ್ ಮಾನ್ಯತೆ: ನ್ಯಾಕ್ ಎ ಗ್ರೇಡ್ ಮಾನ್ಯತೆಗೆ ವಿಶ್ವವಿದ್ಯಾಲಯ ಎಲ್ಲ ಹಂತದ ಪ್ರಯತ್ನ ಮಾಡಿದರೂ ದೊರೆತಿಲ್ಲ. ಮುಂದಿನ ಎರಡು ವರ್ಷದಲ್ಲಿ ಮತ್ತೆ ನ್ಯಾಕ್​ಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾನ್ಯತೆಗಾಗಿ ಶೈಕ್ಷಣಿಕ ಚಟುವಟಿಕೆ, ಗುಣಮಟ್ಟದ ಸಂಶೋಧನೆ ಹೀಗೆ ಎಲ್ಲ ಹಂತದಲ್ಲೂ ದಾಖಲೆ ಸಂಗ್ರಹಿಸಿರಬೇಕು. ಆದರೆ ಪ್ರಸಕ್ತ ಇದ್ಯಾವುದೂ ನಡೆಯುತ್ತಿಲ್ಲ. ಗುಣಮಟ್ಟದ ಪ್ರಕಟಣೆ, ಪೂರ್ಣಾವಧಿ ಕುಲಪತಿ ಇಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗದು. ಖಾಲಿ ಹುದ್ದೆಗಳ ಭರ್ತಿಗೆ ಯುಜಿಸಿ ಡೆಡ್​ಲೈನ್ ನೀಡಿದೆ. ಪೂರ್ಣಪ್ರಮಾಣದ ಕುಲಪತಿ ಇಲ್ಲದಿರುವಾಗ ನೇಮಕಾತಿ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ವಿಚಾರ ಸಂಕಿರಣ, ಕಾರ್ಯಾಗಾರ, ಕ್ರೀಡಾಕೂಟ ಹೀಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಈವೆಂಟ್ಸ್​ಗಳು ನ್ಯಾಕ್​ಗೆ ಪೂರಕವಾಗಲಿವೆ. ಆದರೆ ಇದ್ಯಾವುದೂ ಸಾಧ್ಯವಾಗುತ್ತಿಲ್ಲ.

ಸರ್ಕಾರದ ಕಡೆಗಣನೆ: ಕುಲಪತಿ ಹುದ್ದೆ ನೇಮಕ ಪ್ರಕ್ರಿಯೆ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಶೋಧನಾ ಸಮಿತಿ ರಚನೆಯಾಗಿ ಪ್ರಕ್ರಿಯೆ ಪೂರ್ಣಗೊಂಡರೂ ಕುಲಪತಿ ನೇಮಕ ಪ್ರಕ್ರಿಯೆಗೆ ಸರ್ಕಾರ ಮುಂದಾಗುತ್ತಿಲ್ಲ. ಹಿಂದಿನ ಸರ್ಕಾರ ಶೋಧನಾ ಸಮಿತಿ ರಚಿಸಿದ್ದು, ಈಗಿನ ಸರ್ಕಾರ ಸಮಿತಿ ಅಧ್ಯಕ್ಷರನ್ನು ಬದಲಾವಣೆ ಮಾಡಲು ವಿಳಂಬ ಮಾಡುತ್ತಿದೆ. ಸಮಿತಿ ರಚನೆಯಾಗಿ ಸಭೆ ನಡೆದು ಸರ್ಕಾರಕ್ಕೆ ಹೆಸರುಗಳ ಶಿಫಾರಸು ಮಾಡುವ ಕೆಲಸ ಈಗಾಗಲೇ ಮುಗಿಯಬೇಕಿತ್ತು. ಆದರೆ ವಿಳಂಬ ನೀತಿ ವಿದ್ಯಾರ್ಥಿಗಳನ್ನು ಫಜೀತಿಗೆ ತಳ್ಳಿದೆಯಲ್ಲದೆ ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿದೆ.

ವಿಸಿ ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ: ಕುಲಪತಿ ಹುದ್ದೆಗೆ ಗುಲ್ಬರ್ಗ ವಿವಿ ಅನೇಕ ಪ್ರಾಧ್ಯಾಪಕರು ಅರ್ಹರಿದ್ದಾರೆ. ಡಾ.ದಯಾನಂದ ಅಗಸರ, ಡಾ.ಎಸ್.ಪಿ. ಮೇಲ್ಕೇರಿ, ಡಾ.ಚಂದ್ರಕಾಂತ ಯಾತನೂರ, ಡಾ.ಸಿ. ಸೋಮಶೇಖರ, ಡಾ.ಪರಿಮಳಾ ಅಂಬೇಕರ್, ಡಾ.ಸುರೇಖಾ ಕ್ಷೀರಸಾಗರ, ಡಾ.ರಾಜನಾಳಕರ್ ಲಕ್ಷ್ಮಣ, ಡಾ.ಬಿ.ಎಂ. ಕೆರೂರ್, ಡಾ.ಎನ್.ಬಿ. ನಡುವಿನಮನಿ, ಡಾ.ಟಿ. ಶಂಕರಪ್ಪ, ಡಾ.ಎಚ್.ಟಿ. ಪೋತೆ, ಡಾ.ಕೆ.ಸಿದ್ದಪ್ಪ 10 ವರ್ಷಕ್ಕೂ ಅಧಿಕ ಪ್ರಾಧ್ಯಾಪಕರಾಗಿ ಕೆಲಸ ಮಾಡುವ ಮೂಲಕ ಹುದ್ದೆಗೆ ಅರ್ಹತೆ ಹೊಂದಿದ್ದಲ್ಲದೆ ಆಕಾಂಕ್ಷಿಗಳೂ ಹೌದು. ಜತೆಗೆ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್. ಪಾಸೋಡಿ ಸೇರಿ ಅನೇಕರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕದ ಈ ವಿವಿ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕುಲಪತಿ ಹುದ್ದೆ ಭರ್ತಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು ಎಂಬುದು ಜನರ ಒತ್ತಾಸೆ.

ಶೋಧನಾ ಸಮಿತಿ ರಚನೆಯಾಗಿ ತುಂಬ ದಿನವಾಗಿದ್ದರೂ ಮುಂದಿನ ಬೆಳವಣಿಗೆ ಗೊತ್ತಾಗಿಲ್ಲ. ಪೂರ್ಣಪ್ರಮಾಣದ ಕುಲಪತಿ ನೇಮಕವಾದರೆ ಆಡಳಿತ ಚುರುಕುಗೊಳ್ಳಲಿದೆ. ರಾಜ್ಯ ಶೀಘ್ರ ಕ್ರಮ ಕೈಗೊಳ್ಳಬೇಕು. | ಪ್ರೊ.ಸಿ.ಸೋಮಶೇಖರ ಗುಲ್ಬರ್ಗ ವಿವಿ ಕುಲಸಚಿವ ಗುಲ್ಬರ್ಗ ವಿಶ್ವವಿದ್ಯಾಲಯದ ಬಹುತೇಕ ಚಟುವಟಿಕೆ ಸ್ತಬ್ಧವಾಗಿದೆ. ಶಿಕ್ಷಕರಿಲ್ಲ, ಶಿಕ್ಷಕೇತರ ಸಿಬ್ಬಂದಿ ಇಲ್ಲದೆ ಗೋಳು ಕೇಳೋರೇ ಇಲ್ಲ. ಇಂತಹ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ನೀಡಿರುವ ಪ್ರಾಧಾನ್ಯತೆ ಕುಲಪತಿ ಹುದ್ದೆ ಭರ್ತಿಗೂ ನೀಡಬೇಕು. | ಎಂ.ಬಿ. ಅಂಬಲಗಿ ಅಧ್ಯಕ್ಷ, ಈಶಾನ್ಯ ವಲಯ ಶಿಕ್ಷಕರ ವೇದಿಕೆ ಕಲಬುರಗಿ

| ಜಯತೀರ್ಥ ಪಾಟೀಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net