

ಕಾಮಸಮುದ್ರ : ಒಂದೂವರೆ ವರ್ಷದಿಂದ ಇಡೀ ವಿಶ್ವವನ್ನೇ ನಲುಗುವಂತೆ ಮಾಡಿರುವ ಕರೊನಾ ಒಂದು ಪ್ರಕರಣವೂ ಕಾಣಿಸಿಕೊಳ್ಳದ ಹೋಬಳಿಯ ಗ್ರಾಮದ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ಎರಡು ದಿನ ಗಂಗಮ್ಮದೇವಿ ಹಬ್ಬ ಆಚರಿಸಿದ್ದಾರೆ.
ಕಾಮಸಮುದ್ರ ಹೋಬಳಿಯ ಗಡಿಯಂಚಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಪೋಲೇನಹಳ್ಳಿಯಲ್ಲಿ ಕರೊನಾ ಮೊದಲನೇ ಅಲೆ ಮತ್ತು ಎರಡನೇ ಅಲೆ ಪ್ರಾರಂಭವಾದಾಗ ಗ್ರಾಮಸ್ಥರೆಲ್ಲರೂ ಕರೊನಾ ಮಹಾಮಾರಿ ಆವರಿಸದೆ ಇದ್ದರೆ ಜಾತ್ರೆ ಮಾಡುವುದಾಗಿ ಹರಕೆ ಮಾಡಿಕೊಂಡಿದ್ದರ ಫಲವಾಗಿ ಒಂದೂವರೆ ವರ್ಷದಿಂದ ತಾಲೂಕಿನಾದ್ಯಂತ ಕರೊನಾ ಪ್ರಕರಣ ಹೆಚ್ಚಾಗಿ ಕಾಣಿಸಿಕೊಂಡರೂ ಗ್ರಾಮದಲ್ಲಿ ಒಂದೇ ಒಂದು ಸೋಂಕು ದಾಖಲಾಗಿಲ್ಲ.
ಗಂಗಮ್ಮ ದೇವಿಯೇ ಹಳ್ಳಿಯನ್ನು ರಕ್ಷಿಸಿದ್ದಾಳೆ ಎಂದು ಭಾವಿಸಿ ಎಲ್ಲರೂ ಒಟ್ಟಾಗಿ ಸೇರಿ ಶ್ರದ್ಧಾ ಭಕ್ತಿಯಿಂದ ಪಲ್ಲಕ್ಕಿ, ಹೂವಿನ ಕರಗ ಮತ್ತು ದೀಪೋತ್ಸವ ಮಾಡಿ ಹರಕೆ ತೀರಿಸಿದ್ದಾರೆ. ಗ್ರಾಮದಲ್ಲಿ ಸಾಮರಸ್ಯ ಕೊರತೆಯಿಂದ ಹಲವು ವರ್ಷಗಳಿಂದ ಸಾಮೂಹಿಕವಾಗಿ ಹಬ್ಬ ಆಚರಿಸದೆ ಮುನಿಸಿಕೊಂಡಿದ್ದ ಜನರೆಲ್ಲರೂ ಕರೊನಾದಿಂದಾಗಿ ಮತ್ತೆ ಒಂದಾಗಿದ್ದು, ಸಂಭ್ರಮದಿಂದ ಜಾತ್ರೆ ಆಚರಿಸಿದ್ದಾರೆ.
ಸೋಮವಾರ ನೆರೆಯ ಆಂಧ್ರಪ್ರದೇಶದಿಂದ ಬಂದಿದ್ದ ಕರಗ ಪೂಜಾರಿ ಹೂವಿನ ಕರಗವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಗಂಗಮ್ಮಮತ್ತು ಯಲ್ಲಮ್ಮದೇವಿ ಉತ್ಸವ ಮೂರ್ತಿಗಳನ್ನು ಮುತ್ತಿನ ಪಲ್ಲಕಿಯಲ್ಲಿಟ್ಟು ಮೆರವಣಿಗೆ ಮಾಡಿದರು. ಗಂಗಮ್ಮ ಜಾತ್ರೆ ಪ್ರಯುಕ್ತ ಪೊಲೇನಹಳ್ಳಿಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿದ್ದರು. ಸಾಮೂಹಿಕವಾಗಿ ದೀಪೋತ್ಸವ ಮೆರವಣಿಗೆ ಮಾಡಿದರು.