ಜಿಲ್ಲೆಯಲ್ಲಿಲ್ಲ ಕೋಳಿ ಶೀತ ಜ್ವರ ಪ್ರಕರಣ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಲ್ಲಿ ಕೋಳಿ ಶೀತ ಜ್ವರದ ಬಗ್ಗೆ ಯಾವುದೇ ಪ್ರಕರಣ ವರದಿ ಆಗಿಲ್ಲ. ಕೋಳಿ ಮತ್ತು ಇತರೆ ಪಕ್ಷಿಗಳ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪಶು ವೈದ್ಯಕಿಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು ಎಂದು ಪಶುಪಾಲನೆ ಮತ್ತು ಪಶು ವೈದ್ಯಕಿಯ ಇಲಾಖೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಕೋಳಿ ಶೀತಜ್ವರ ಕಂಡು ಬಂದಿದೆ. ಇದು ಪಕ್ಷಿಗಳಲ್ಲಿನ ಮಾರಣಾಂತಿಕ ಕಾಯಿಲೆಯಾಗಿದ್ದು, ಶೇ. 50ರಷ್ಟು ಕೋಳಿಗಳು ಸಾಯುವ ಸಂಭವ ಇರುತ್ತದೆ. ಇದು ಎಚ್​5 ಎನ್​1 ಸೋಂಕು. ಕೋಳಿಗಳಿಂದ ಮನುಷ್ಯರಿಗೆ ವೈರಸ್​ ಹರಡುವ ಸಂಭವವಿಲ್ಲ.

ಕೋಳಿ ಮತ್ತು ಮೊಟ್ಟೆಯನ್ನು ಸೇವಿಸಲು ಯಾವುದೇ ನಿರ್ಬಂಧ ಇಲ್ಲ. ಆದರೆ ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ಆಹಾರವಾಗಿ ಉಪಯೋಗಿಸಬಹುದು. ಹಾಗಾಗಿ ಜನರು ಜ್ವರದ ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ 14.60 ಲಕ್ಷ ಕೋಳಿಗಳನ್ನು ಸಾಕಲಾಗುತ್ತಿದೆ. ಈವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಜೈವಿಕ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಎಲ್ಲ ವಾಣಿಜ್ಯ ಕೋಳಿ ಸಾಕಣಿಕೆ ಕೇಂದ್ರಗಳಿಗೆ ಮನವಿ ಮಾಡಲಾಗಿದೆ ಎಂದು ಡಾ. ರವಿ ಸಾಲಿಗೌಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net