

ಮಂಗಳೂರು: ಭಾನುವಾರ ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಯುವಕನ ಗಂಟಲಿನ ಸ್ರಾವ ಪರೀಕ್ಷೆ ವರದಿ ಬಂದಿದ್ದು, ಕರೊನಾ ಸೋಂಕು ಇಲ್ಲ ಎಂಬುದು ಖಚಿತಗೊಂಡಿದೆ.
ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ತಲಪಾಡಿ ಕೆ.ಸಿ.ನಗರದ ಯುವಕನನ್ನು ವಿಮಾನ ನಿಲ್ದಾಣದಿಂದ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ವೈದ್ಯರ ಗೊಂದಲದಿಂದ ಯುವಕ ತಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇನೆಂದು ಮನೆಗೆ ಮರಳಿದ್ದ. ಈ ಬಗ್ಗೆ ಟೀಕೆಗಳು ವ್ಯಕ್ತವಾದ ಬಳಿಕ ಸೋಮವಾರ ತಹಸೀಲ್ದಾರ್, ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ಮತ್ತಿತರರು ವಿಟ್ಲದಲ್ಲಿರುವ ಯುವಕನ ಪತ್ನಿಯ ಮನೆಗೆ ತೆರಳಿ, ಆತನ ಮನವೊಲಿಸಿ ಬಂಟ್ವಾಳ ತಾಲೂಕು ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು.
ಬುಧವಾರ ಕರೊನಾ ಪರೀಕ್ಷೆ ವರದಿ ನೆಗೆಟಿವ್ ಎಂಬ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಜತೆಗೆ ದ.ಕ. ಜಿಲ್ಲೆಯ 8 ಖಾಸಗಿ ಆಸ್ಪತ್ರೆಗಳಲ್ಲೂ ಐಸೊಲೇಶನ್ ವಾರ್ಡುಗಳನ್ನು ತೆರೆದಿರುವ ಕುರಿತ ಮಾಹಿತಿ ನೀಡಿದ್ದಾರೆ.