ನಕಲಿ ತೆಂಗಿನೆಣ್ಣೆ ದಂಧೆಗಿಲ್ಲ ಬ್ರೇಕ್!: ಮಾರುಕಟ್ಟೆಯಲ್ಲಿ ಬಿರುಸಾಗಿದೆ ಕಲಬೆರಕೆ ಉಪ್ಪು

New Project (30)
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ತೆಂಗಿನಕಾಯಿಯ ಮಾರುಕಟ್ಟೆ ದರ ಹೆಚ್ಚಳವಾದ ಬೆನ್ನಲ್ಲೇ ನಕಲಿ ತೆಂಗಿನ ಎಣ್ಣೆ ದಂಧೆ ತಲೆ ಎತ್ತಿದ್ದು, ಕಾಸರಗೋಡು ಜಿಲ್ಲೆಯ ಮಾರುಕಟ್ಟೆ ಹಾಗೂ ಆಹಾರ ತಯಾರಿಕಾ ಕೇಂದ್ರಗಳಿಗೆ ನಕಲಿ ತೆಂಗಿನ ಎಣ್ಣೆ ಈಗಾಗಲೇ ಸೇರಿಕೊಂಡಿದೆ.

ತೆಂಗಿನಕಾಯಿ ಹಾಗೂ ತೆಂಗಿನ ಎಣ್ಣೆಯ ಮಾರುಕಟ್ಟೆ ದರ ಹೆಚ್ಚಳವಾದರೂ ತೆಂಗು ಕೃಷಿಕರಿಗೆ ಮಾತ್ರ ಇದರ ಲಾಭ ದೊರೆಯುತ್ತಿಲ್ಲ. ಬೆಲೆ ಹೆಚ್ಚಳದ ಲಾಭ ಪಡೆಯಲು ಕಲಬೆರಕೆ ಎಣ್ಣೆ ಮಾರಾಟ ಮಾಡುವ ದಂಧೆಕೋರರು ಹವಣಿಸುತ್ತಿದ್ದು, ಆಹಾರ ತಯಾರಿಕಾ ಕೇಂದ್ರ ಹಾಗೂ ಹೋಟೆಲ್‌ಗಳಿಗೆ ನಕಲಿ ಎಣ್ಣೆ ಈಗಾಗಲೇ ಮಾರಾಟ ಮಾಡಿರುವ ಶಂಕೆಯಿದೆ. ಜನರ ಆರೋಗ್ಯದ ಮೇಲೆ ಭಾರಿ ಅಡ್ಡ ಪರಿಣಾಮ ಬೀರುವ ಅಪಾಯವಿದ್ದು, ಆಹಾರ ಇಲಾಖೆ ಕೂಡಲೇ ಇವುಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕಿದೆ.

ಮಾರುಕಟ್ಟೆ ಧಾರಣೆ: ಊರ ತೆಂಗಿನಕಾಯಿಗೆ ತಲಾ ಕೆ.ಜಿ.ಗೆ 90ರಿಂದ 100 ರೂ. ಮಾರುಕಟ್ಟೆ ದರವಿದ್ದು, ತೆಂಗಿನ ಎಣ್ಣೆ ತಲಾ ಲೀಟರ್‌ಗೆ 450 ರೂ. ಇದೆ. ಹಿಂದಿನ ವರ್ಷ ತೆಂಗಿನ ಎಣ್ಣೆಗೆ 180 ಇದ್ದು, ತೆಂಗಿನಕಾಯಿ ಕೆ.ಜಿ.ಗೆ 32 ಇತ್ತು. ಪ್ರಸಕ್ತ ವರ್ಷ ಎರಡಲ್ಲೂ ಭಾರಿ ಏರಿಕೆ ಕಂಡಿದೆ.

ಉಪ್ಪಿನಲ್ಲೂ ವಿಷಾಂಶ: ನಕಲಿ ಎಣ್ಣೆ ಜತೆಗೆ ನಕಲಿ ಉಪ್ಪಿನ ಮಾರಾಟವೂ ಹಲವೆಡೆ ಬಿರುಸಾಗಿ ಸಾಗುತ್ತಿದ್ದು, ಸಂಬಂಧಿತ ಇಲಾಖೆ, ಅಧಿಕಾರಿಗಳು ಕಣ್ಣಿದ್ದು ಕುರುಡರಂತಿದ್ದಾರೆ. ನಕಲಿ ಉಪ್ಪಿಗೆ ಬಿಳಿ ಬಣ್ಣ ದೊರೆಯಲು ಕ್ಯಾಲ್ಸಿಯಂ ಕಾರ್ಬೋನೇಟ್ ಬೆರೆಸಲಾಗುತ್ತಿದ್ದು, ಆಹಾರ ಭದ್ರತಾ ಇಲಾಖೆಯ ತಪಾಸಣೆಯಿಂದ ಬೆಳಕಿಗೆ ಬಂದಿದೆ.

ಶಿಕ್ಷೆ ಪ್ರಮಾಣ ಏನು?

ಆಹಾರ ಭದ್ರತಾ ಗುಣಮಟ್ಟ ನಿಯಮ ಜಾರಿಯಲ್ಲಿದ್ದರೂ ನಕಲಿ ಉಪ್ಪು ಹಾಗೂ ಎಣ್ಣೆಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಹೊಸ ಕಾನೂನು ಪ್ರಕಾರ, ಆಹಾರ ವಸ್ತುವಿನಲ್ಲಿ ಕಲಬೆರಕೆ ಅಥವಾ ಕಳಪೆ ಗುಣಮಟ್ಟವಿರುವ ಕುರಿತು ಸಾಬೀತಾದರೆ ಸಜೆ, ದಂಡ ಸಹಿತ ಕಠಿಣ ಶಿಕ್ಷೆ ವಿಧಿಸಲು ಅವಕಾಶವಿದೆ. ಅಪರಾಧದ ತೀವ್ರತೆ ಆಧಾರದಲ್ಲಿ 10 ಲಕ್ಷ ರೂ. ತನಕ ದಂಡ ಅಥವಾ ಆಜೀವ ಪರ್ಯಂತ ಸಜೆ ಶಿಕ್ಷೆಗೆ ಒಳಪಡಿಸಬಹುದು.

ಓಣಂ ಸೀಸನ್ ಆರಂಭಕ್ಕೆ ವಾರಗಳಷ್ಟೇ ಬಾಕಿ ಇದ್ದು, ವಿಷಾಂಶ ಬೆರೆತ ನಕಲಿ ತೆಂಗಿನೆಣ್ಣೆ ಮಾರುಕಟ್ಟೆಗೆ ಈಗಾಗಲೆ ತಲುಪಿರುವ ಸಾಧ್ಯತೆ ಇದೆ. ತಪಾಸಣೆ ಚುರುಕುಗೊಳಿಸುವ ಅಗತ್ಯವಿದ್ದು, ಈ ಬಗ್ಗೆ ಗ್ರಾಹಕರೂ ದೂರುಗಳನ್ನು ಸಲ್ಲಿಸುವುದು ಉತ್ತಮ. ಸಾಬೀತಾದರೆ ಕಠಿಣ ಶಿಕ್ಷಗೆ ಒಳಪಡಿಸಲಾಗುತ್ತದೆ. ಎಬಿ ಐಪ್, ಸದಸ್ಯ, ಆಹಾರ ಸಲಹಾ ವಿಜಿಲೆನ್ಸ್ ಸಮಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net