

ಕಲಬುರಗಿ: ಪರಿಸ್ಥಿತಿ ಎಲ್ಲಿಗೆ ಬಂತು ಎಂದರೆ, ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿಗೆ ಬೆಲೆಯೇ ಇಲ್ಲ. ಬೀದಿಯಲ್ಲಿ ನೋಟುಗಳು ಬಿದ್ದಿದ್ದರೂ ಅವುಗಳನ್ನು ಹೆಕ್ಕಿ ಜೇಬಿಗಿಳಿಸುವುದಕ್ಕೆ ಜನ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇಂಥದ್ದೊಂದು ಘಟನೆ ಕಲಬುರಗಿಯ ಅಳಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಕರೊನಾ ಸೋಂಕಿನ ಭೀತಿಯ ಕಾರಣಕ್ಕೆ ಅವರು ನೋಟುಗಳನ್ನೇ ಸುಟ್ಟುಹಾಕುವ ಸ್ಥಿತಿ ಈಗ ನಿರ್ಮಾಣವಾಗಿದೆ. ಅಳಂದ ತಾಲೂಕಿನ ಸುಂಟನೂರು ಗ್ರಾಮದಲ್ಲಿನ ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಂಟನೂರು ಗ್ರಾಮಕ್ಕೆ ಆಗಮಿಸಿದ ಮೂವರು ಅಪರಿಚಿತರು ನೋಟುಗಳನ್ನು ಬಿಸಾಕಿ ಹೋದರು. ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಕೈಗೆ ಗ್ಲೌಸ್ ಕೂಡ ಧರಿಸಿದ್ದರು. ಅವರು ನೋಟುಗಳನ್ನು ಎಸೆದು ಹೋಗುವುದನ್ನು ನಾವು ನೋಡಿದ್ದೇವೆ. ಅವರು ಅತ್ತ ಹೋದ ಕೂಡಲೇ ನಾವು ಆ ನೋಟುಗಳ ಮೇಲೆ ಮಣ್ಣು ಹಾಕಿದೆವು. ಅವು 10 ರೂಪಾಯಿ ಮತ್ತು 50 ರೂಪಾಯಿ ಮುಖಬೆಲೆಯ ನೋಟುಗಳಾಗಿದ್ದವು. ಮಕ್ಕಳು ಇನ್ನು ಅದನ್ನು ಕೈಗೆತ್ತಿಕೊಳ್ಳುವುದು ಬೇಡ ಎಂಬ ಮುಂಜಾಗ್ರತಾ ಕ್ರಮವಾಗಿ ಹಾಗೆ ಮಾಡಿದೆವು. ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿಸಿದೆವು ಎಂದು ಅಲ್ಲಿನ ಒಂದಿಬ್ಬರು ಮಹಿಳೆಯರು ಹೇಳಿಕೊಂಡಿದ್ದಾರೆ.
ಯಾರೋ ಉಗುಳು ಹಚ್ಚಿ ಆ ನೋಟುಗಳನ್ನು ಅಲ್ಲಿ ಬಿಸಾಕಿರಬೇಕು ಎಂಬ ಸಂದೇಹ ಗ್ರಾಮಸ್ಥರನ್ನು ಕಾಡಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರಾಮದ ಯುವಕರು ಮಣ್ಣನ್ನು ದೂರ ಸರಿಸಿ ಆ ನೋಟುಗಳ ಸುತ್ತ ಕಸಕಡ್ಡಿ ತುಂಬಿ ಬೆಂಕಿ ಹಚ್ಚಿದ್ದಾರೆ. ಈ ವಿಡಿಯೋ ಕೂಡ ಇದ್ದು ವೈರಲ್ ಆಗಿದೆ.