

ಲಕ್ಷ್ಮೇಶ್ವರ: ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಜನ್ಮದಂದು ಸಂಭ್ರಮ ಆಚರಣೆ ಬೇಡ ಎಂದು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು , ಕಳೆದ ವರ್ಷದ ಜನ್ಮ ದಿನಾಚರಣೆ ವೇಳೆ ಆದ ಕರಾಳ ದಿನವನ್ನು ನೆನಪಿಸಿದ್ದಾರೆ.
2024ರ ಜನವರಿ 8ರಂದು ತಾಲೂಕಿನ ಸೂರಣಗಿ ಗ್ರಾಮದಲ್ಲಿ ನೆಚ್ಚಿನ ನಟ ಯಶ್ ಅವರ ಭಾವಚಿತ್ರದ ಬೃಹತ್ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶದಿಂದಾಗಿ ಅಭಿಮಾನಿಗಳಾದ ಹನುಮಂತಪ್ಪ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ ಗಾಜಿ ದುರಂತಕ್ಕೀಡಾಗಿದ್ದರು.
ಈ ವೇಳೆ ನಟ ಯಶ್ ಅವರು ಹೊರ ರಾಜ್ಯದಲ್ಲಿದ್ದರೂ ಅದೇ ದಿನ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ಕಲ್ಪಿಸಿದ್ದರು. ಯಶ್ ಅವರು ತಮ್ಮ ಜನ್ಮ ದಿನಾಚರಣೆಯ ಮುನ್ನಾ ದಿನ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ...
ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ ಬದುಕೋಣ. ಬದುಕನ್ನು ಮೆರಗುಗೊಳಿಸುವಂಥ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಜನ್ಮದಿನದಂದು ಊರಿನಲ್ಲಿ ಇರುವುದಿಲ್ಲ. ನನ್ನ ಜನ್ಮದಿನಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ.
ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೇ ಮತ್ತು ನನ್ನ ಮನಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡದಾದ ಜನ್ಮದಿನದ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತು ತರಲಿ ಎಂದು ಆಶಿಸಿದ್ದಾರೆ.