ಪ್ರತಿಭಟನೆಗೆ ಸೀಮಿತವಾದ ಬಂದ್

bandh
Published on

ಹುಬ್ಬಳ್ಳಿ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್​ಗೆ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹದಾಯಿ ಹೋರಾಟಗಾರರರು, ಕನ್ನಡ ಪರ ಹಾಗೂ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ನಗರ-ದೂರ ಸಂಚಾರದ ಸಾರಿಗೆ ಬಸ್​ಗಳು, ಬಿಆರ್​ಟಿಎಸ್ ಚಿಗರಿ ಬಸ್, ಬೇಂದ್ರೆ ನಗರ ಸಾರಿಗೆ ಹಾಗೂ ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಸರ್ಕಾರಿ ಶಾಲಾ -ಕಾಲೇಜುಗಳು ತೆರೆದಿದ್ದವು. ಧಾರವಾಡ ಜಿಲ್ಲೆಯ ಶಾಲಾ-ಕಾಲೇಜ್​ಗಳಿಗೆ ಜಿಲ್ಲಾಡಳಿತ ರಜೆ ಘೊಷಿಸಿರಲಿಲ್ಲ. ಕೆಲ ಖಾಸಗಿ ಶಾಲೆ, ಕಾಲೇಜ್​ಗಳು ರಜೆ ನೀಡಿದ್ದವು. ಹೋಟೆಲ್, ರೆಸ್ಟೋರೆಂಟ್, ಕಿರಾಣಿ ಅಂಗಡಿಗಳು ಬೆಳಗ್ಗೆಯಿಂದಲೇ ವಹಿವಾಟು ನಡೆಸಿದವು.

ನಗರದ ಕೊಪ್ಪಿಕರ ರಸ್ತೆ, ದುರ್ಗದಬೈಲ್, ದಾಜಿಬಾನಪೇಟ, ವಿದ್ಯಾನಗರ ಸೇರಿ ಎಲ್ಲೆಡೆ ವ್ಯಾಪಾರ-ವಹಿವಾಟು ಎಂದಿನಂತೆ ನಡೆಯಿತು. ಕೇಶ್ವಾಪುರ ವಾರದ ಸಂತೆಗೂ ಬಂದ್ ಬಿಸಿ ತಟ್ಟಲಿಲ್ಲ. ನಗರದಲ್ಲಿ ಕರ್ನಾಟಕ ಬಂದ್ ಪ್ರತಿಭಟನೆಗೆ ಸೀಮಿತವಾಗಿತ್ತು. ಚನ್ನಮ್ಮ ವೃತ್ತದಲ್ಲಿ ಅಮೃತ ಇಜಾರಿ ನೇತೃತ್ವದಲ್ಲಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸ್ಟಾಲಿನ್ ವಿರುದ್ಧ ಧಿಕ್ಕಾರದ ಘೊಷಣೆ ಕೂಗಿದರು. ಕೆಲ ಸಮಯದ ಬಳಿಕ ವಾಹನಗಳ ಸಂಚಾರ ತಡೆದು ಧರಣಿ ನಡೆಸಲು ಮುಂದಾದಾಗ 12 ಜನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ವಾಹನದಲ್ಲಿ ಬೇರೆಡೆ ಸಾಗಿಸಿದರು. ಇದಕ್ಕೂ ಪೂರ್ವ ಇದೇ ಸಂಘಟನೆಯ ಕಾರ್ಯಕರ್ತರು ಹೊಸೂರು ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net