

ಮೈಸೂರು: ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ 2 ವರ್ಷಗಳು ಕಳೆದಿದೆ. ಆದರೆ, ಇದಕ್ಕೆ ಪರ್ಯಾಯ ನೀತಿ ಜಾರಿಯಾಗಿಲ್ಲ ಎಂದು ಎಂದು ಶಾಸಕ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ) ಮತ್ತು ಚೈಲ್ಡ್‌ಫಂಡ್ ಇಂಟರ್‌ನ್ಯಾಷನಲ್ ಸಂಸ್ಥೆಯ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ‘ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು’ ಕುರಿತು ಜಾಗೃತಿ ಹಾಗೂ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಬೇಕೇ ಅಥವಾ ಬೇಡವೇ ಎಂದು ಸಾಕಷ್ಟು ಚರ್ಚೆ ನಡೆದು ಅಂತಿಮವಾಗಿ ಜಾರಿಗೊಳಿಸದಿರಲು ತೀರ್ಮಾನಿಸಲಾಯಿತು. ಆದರೆ, ಅದಕ್ಕೆ ಪರ್ಯಾಯವಾಗಿ ಏನು ಮಾಡಬೇಕು ಎಂದು ಆಲೋಚಿಸಬೇಕು ಎಂದರು.
ರಾಜ್ಯ ಸರ್ಕಾರ 49 ಸಾವಿರ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದ್ದು, ಇದರಲ್ಲಿ 23 ಸಾವಿರ ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಲು ಬಯಸುತ್ತಿದ್ದಾರೆ. ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಎಂಬುದು ಪಾಲಕರ ಆಯ್ಕೆಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆಂಗ್ಲಮಾಧ್ಯಮ ಶಾಲೆಗೆ ರಾಜ್ಯದಲ್ಲಿ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿದೆ ಎಂದರು.
ಉತ್ತಮ ಸಮಾಜ ನಿರ್ಮಾಣ ಮಾಡಲು ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು. ಪ್ರಸ್ತುತ ನಮ್ಮ ಸಾಕ್ಷರತೆ ಶೇ.78 ರಷ್ಟು ಇದ್ದು, ಈ ಪ್ರಮಾಣ ಶೇ.100ಕ್ಕೆ ಏರಿಕೆಯಾಗಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಸಾಧನೆ ತೋರಬೇಕು. ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪರಿಶ್ರಮ ಪಡಬೇಕು ಎಂದು ಕರೆ ನೀಡಿದರು.
ಶಿಕ್ಷಣದ ಮಹತ್ವದ ಅರಿವು ಪ್ರತಿಯೊಬ್ಬರಿಗೂ ಇದೆ. ಶಿಕ್ಷಣದಿಂದ ನಮ್ಮ ಬದುಕಿನಲ್ಲಿ ಆಗುವ ಬದಲಾವಣೆಗಳು ಏನು, ಶಿಕ್ಷಣವನ್ನು ನಾವು ಯಾವ ಮಟ್ಟದಲ್ಲಿ ಪಡೆದುಕೊಳ್ಳಬೇಕು ಎಂದು ಜನರು ಅರಿತುಕೊಂಡಿದ್ದಾರೆ. ಅನೇಕ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಭರದಲ್ಲಿ ಅವರ ಮೇಲೆ ಒತ್ತಡ ಹೇರುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ, ಮಕ್ಕಳು ಮುಕ್ತ ವಾತಾವರಣದಲ್ಲಿ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ಚಂದ್ರೇಗೌಡ, ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ, ಚೈಲ್ಡ್‌ಫಂಡ್ ಇಂಟರ್‌ನ್ಯಾಷನಲ್‌ನ ಕಾರ್ಯಕ್ರಮ ತಜ್ಞೆ ಶೈನಿ ಜಾಕೋಬ್, ಆರ್‌ಎಲ್‌ಎಚ್‌ಪಿ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್ ಇದ್ದರು.