

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಅವಳಿ ನಗರದ ಸಾಧಕರಿಗೆ ನೀಡಲಾಗುವ ಧೀಮಂತ ಪ್ರಶಸ್ತಿ (ಸನ್ಮಾನ)ಗೆ ಈ ಬಾರಿ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸ್ಪಷ್ಟ ಪಡಿಸಿದರು.
ಪಾಲಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಮಟ್ಟದ ಸಾಧನೆ ಮಾಡಿರುತ್ತಾರೆ. ವಯಸ್ಸಿನ ಮಿತಿ ಹೇರಿದರೆ ಅಂಥವರು ಪ್ರಶಸ್ತಿಯಿಂದ ವಂಚಿತರಾಗುತ್ತಾರೆ. ಮೆರಿಟ್ ನೋಡಿಕೊಂಡು ಈ ಬಾರಿ ಪ್ರಶಸ್ತಿ ನೀಡುತ್ತೇವೆ ಎಂದು ತಿಳಿಸಿದರು.
ಒಟ್ಟು 16 ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಧೀಮಂತ ಪ್ರಶಸ್ತಿ ನೀಡಲಾಗುವುದು. ಇದಕ್ಕಾಗಿ ರಚಿಸಲಾಗಿರುವ ಸಮಿತಿಯು ಅರ್ಜಿಗಳನ್ನು ಆಹ್ವಾನಿಸಲಿದೆ. ಈಗಾಗಲೇ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ 6 ಸಮಿತಿಗಳನ್ನು ರಚಿಸಲಾಗಿದೆ. ಸಸಿಗಳನ್ನು ನೆಡಲು ಹಾಗೂ ಪ್ರಸಿದ್ಧ ಕಲಾವಿದರನ್ನು ಕರೆಯಿಸಿ ಸಂಗೀತ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಭಾಗವಹಿಸುವಿಕೆ ಕಡ್ಡಾಯಗೊಳಿಸಿ
ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲಿಕೆಯ ಸದಸ್ಯರು ಹಾಗೂ ಜನಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿ. ಸಾಧಕರಿಗೆ ನೀಡುವ ಧೀಮಂತ ಪ್ರಶಸ್ತಿಗೆ ವಯಸ್ಸಿನ ಮೀತಿ ಬೇಡ. ನಗರದ ರಾಣಿ ಚನ್ನಮ್ಮ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಬೇಕು. ರಾಜ್ಯೋತ್ಸವದ ಮುನ್ನಾ ದಿನ ಪೂರ್ವ ಜಾಗೃತಿ ಅಭಿಯಾನ ನಡೆಸಬೇಕು. ಅವಳಿ ನಗರದ ವಾಣಿಜ್ಯ ಮಳಿಗೆ, ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಅಕ್ಷರ (ದೊಡ್ಡ ಗಾತ್ರದಲ್ಲಿ) ಕಡ್ಡಾಯಗೊಳಿಸಬೇಕು ಎಂಬಿತ್ಯಾದಿ ಸಲಹೆಗಳು ಸಭೆಯಲ್ಲಿ ಕೇಳಿ ಬಂದವು.
ಉತ್ತರ ಕರ್ನಾಟಕ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಕನ್ನಡ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಜೀವ ದುಮಕನಾಳ, ಕರವೇ ಮಂಜುನಾಥ ಲೋತಿಮಠ, ಗಂಗಾಧರ ಕಮಲದಿನ್ನಿ, ಪ್ರೇಮನಾಥ ಚಿಕ್ಕತುಂಬಳ, ಗುರುವಾಥ ಉಳ್ಳಿಕಾಶಿ, ಅಮೃತ ಇಜಾರಿ, ಇತರರು ಮಾತನಾಡಿದರು.
ಮೇಯರ್ ವೀಣಾ ಬರದ್ವಾಡ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಸತೀಶ ಹಾನಗಲ್, ಸಭಾ ನಾಯಕ ಶಿವು ಹಿರೇಮಠ, ಉಪ ಆಯುಕ್ತ ಆನಂದ ಕಲ್ಲೊಳಿಕರ, ಇದ್ದರು.
.