

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ ಎದುರಿನ ಶಿವಶೀಲ ಮಲ್ಟಿಪ್ಲೆಕ್ಸ್ ನಲ್ಲಿ ಎನ್ಎಂಆರ್ ಸ್ಕ್ಯಾನ್ ಸೆಂಟರ್ ನೂತನ ಶಾಖೆ ಆರಂಭಿಸಲಾಗಿದ್ದು, ಆ. 27ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿ ಕಲಘಟಗಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್ ಡೆನಿಸನ್ಸ್ ನಲ್ಲಿ ಅಂದು ಆಯೋಜಿಸಲಾಗಿರುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸ್ಕ್ಯಾನ್ ಸೆಂಟರ್ ಉದ್ಘಾಟನೆ ನೆರವೇರಿಸುವರು.
ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ದಿನೇಶ ಗುಂಡೂರಾವ್, ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಉತ್ತರ ಕರ್ನಾಟಕದಲ್ಲಿ 1991ರಲ್ಲಿ ಪ್ರಥಮ ಡೈಗ್ನೋಸ್ಟಿಕ್ ಸೆಂಟರ್ ಅನ್ನು ಒಂಭತ್ತು ಪ್ರಸಿದ್ಧ ವೈದ್ಯರು ಸೇರಿ ಆರಂಭಿಸಿದರು. ಒಂದೇ ಸೂರಿನಡಿ ಎಲ್ಲ ರೀತಿಯ ಸ್ಕಾನಿಂಗ್, ಲ್ಯಾಬರೋಟರಿ ತಪಾಸಣೆಯ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಇದೀಗ ನಾಲ್ಕು ಕೇಂದ್ರಗಳು ಅವಳಿನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಎನ್ಎಂಆರ್ ರೀಸರ್ಚ್ ಫೌಂಡೇಷನ್ ಸೇವಾಪರ ಸಂಸ್ಥೆಯಿಂದ ಅನೇಕ ರೋಗಿಗಳ ಉಚಿತ ತಪಾಸಣೆ ಶಿಬಿರಗಳನ್ನು ಮಾಡಲಾಗಿದೆ. ಸಂಶೋಧನೆ ಮಾಡುವ ಅನೇಕ ವಿದ್ಯಾಥಿರ್ಗಳಿಗೆ ಉಚಿತ ತರಬೇತಿ, ಮಾಹಿತಿ ಒದಗಿಸಲಾಗುತ್ತಿದೆ ಎಂದು ಡಾ. ಕಲಘಟಗಿ ಹೇಳಿದರು.
ಮೂರು ದಶಕದ ಅವಿರತ ಸೇವೆಯೊಂದಿಗೆ ಇದೀಗ ಗೋಕುಲ ರಸ್ತೆಯಲ್ಲಿ ಹೊಸ ಶಾಖೆ ಆರಂಭಿಸಿದೆ. ಈ ಭಾಗದ ಜನತೆಗೆ ನಿಖರ ಚಿಕಿತ್ಸೆಗೆ ಅನುಕೂಲವಾಗುವ ಇಂರ್ಟವೆನ್ಶನಲ್ ರೇಡಿಯೋಲಾಜಿ (ಶಸ್ತ್ರಚಿಕಿತ್ಸಕ ವಿಕಿರಣಶಾಸ್ತ್ರ) ಸೌಲಭ್ಯ ನೀಡಲಾಗುತ್ತಿದೆ ಎಂದರು.
ಡಾ. ರಾವೇಂದ್ರ ತೋಖಾನೆ, ಡಾ. ಸಚಿನ್ ರೇವಣಕರ, ಡಾ. ಸುಹಾಸ ಕಲಟಗಿ, ಡಾ. ಶ್ರೀನಿವಾಸ ಜೋಶಿ ಗೋಷ್ಠಿಯಲ್ಲಿದ್ದರು.