ಸಿಐಎಸ್‌ಎಫ್ ಯೋಧ ಗುಂಡು ಹೊಡೆದುಕೊಂಡು ಆತ್ಮಹತ್ಯೆ

mng---22 Oct Jakeer Husen
Published on

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಭದ್ರತೆ ನೋಡಿಕೊಳ್ಳುವ ಸಿಐಎಸ್‌ಎಫ್ ಪಿಎಸ್‌ಐ ಆಗಿದ್ದ ಜಾಕೀರ್ ಹುಸೇನ್ (58) ಭಾನುವಾರ ಬೆಳಗ್ಗೆ ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಜಾಕೀರ್ ಹುಸೇನ್ ಮೂಲತಃ ರಾಯಚೂರು ನಿವಾಸಿಯಾಗಿದ್ದು ನಿನ್ನೆ ರಾತ್ರಿ ಎನ್‌ಂಪಿಎ ಮೈನ್ ಗೇಟ್ ನಲ್ಲಿ ನೈಟ್ ಶಿಫ್ಟ್ ನಲ್ಲಿ ನಿಯೋಜಿತರಾಗಿದ್ದರು. ಬೆಳಗ್ಗೆ 6.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಬೇರೊಬ್ಬರಿಗೆ ಕೆಲಸ ವಹಿಸಿ ಶೌಚಗೃಹದತ್ತ ತೆರಳಿದ್ದರು. ಅಲ್ಲಿ ಇರುವಾಗಲೇ ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ತಲೆಗೆ ಗುರಿ ಇರಿಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಗುಂಡಿನ ಶಬ್ಧ ಕೇಳಿ ಅಲ್ಲಿದ್ದ ಸಹೋದ್ಯೋಗಿಗಳು ಸ್ಥಳಕ್ಕೆ ಓಡಿ ಹೋದಾಗ ಜಾಕೀರ್ ಹುಸೇನ್ ನೆಲಕ್ಕೆ ಕುಸಿದು ಬಿದ್ದಿದ್ದರು. ತಲೆಯಲ್ಲಿ ಗುಂಡು ನುಗ್ಗಿ ರಕ್ತ ಸ್ರಾವವಾಗುತ್ತಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಯಾವುದೋ ವಿಚಾರಕ್ಕೆ ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದ್ದು, ತನಿಖೆಯ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net