ನಿತ್ಯೋತ್ಸವ ಕನ್ನಡ ರಾಜ್ಯೋತ್ಸವ; ಬೆಳಗಾವಿಯ ನಿವೇದಿತಾ ಸಿದ್ನಾಳ್‌ಗೆ ಪ್ರಶಸ್ತಿ ಗೌರವ

nive
Published on

ಬೆಂಗಳೂರು: ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘವು ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕಲಾವಿದರು, ಗಾಯಕರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಕಣ್ಮನ ತಣಿಸಿದವು.

ನಂತರ ನಡೆದ ಸಮಾರಂಭವನ್ನು ಯುವ ಉದ್ಯಮಿ ಹಾಗೂ ಬೆಳಗಾವಿಯ ಪ್ರಸಿದ್ಧ ವಿಜಯಕಾಂತ ಡೈರಿ ಹಾಗೂ ಆಹಾರ ಉತ್ಪನ್ನಗಳ ಸಂಸ್ಥೆಯ ಉಪಾಧ್ಯಕ್ಷೆ ನಿವೇದಿತಾ ಸಿದ್ನಾಳ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಮಾರಂಭ ಕುರಿತು ಮಾತನಾಡಿದ ಜಸ್ಟೀಸ್ ಎನ್.ಕೆ.ಸುಧೀಂದ್ರರಾವ್, ಹಲವಾರು ಸಾಧಕರನ್ನು ಇಂದು ಸನ್ಮಾನಿಸಲಾಗಿದೆ. ಸಾಧನೆಗೆ ಕೊನೆ ಎಂಬುದಿಲ್ಲ. ನಿತ್ಯ ನಿರಂತರ ಸಾಧನೆ ಮುಂದುವರೆಯಬೇಕು. ಸಾರ್ವಜನಿಕ ಬದುಕಿನಲ್ಲಿ ಸೇವೆ ಮಾಡುವವರು ಪ್ರಚಾರದ ಹಂಬಲ ಇರಿಸಿಕೊಳ್ಳಬಾರದು. ಪ್ರತಿ ಕ್ಷೇತ್ರದಲ್ಲೂ ಜಲಸ್ಸು ಇದ್ದೇ ಇರುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೇ ಮುನ್ನುಗ್ಗಬೇಕು. ಸಾಕಷ್ಟು ಜನ ದುಡ್ಡಿದ್ದವರೇ ಶ್ರೀಮಂತರು ಎಂದು ತಿಳಿದುಕೊಂಡಿರುತ್ತಾರೆ. ನಿಜವಾದ ಶ್ರೀಮಂತಿಕೆ ಇರುವುದು ಹೃದಯ ಶ್ರೀಮಂತಿಕೆಯಲಿ ಎಂದರು.

ಮಿತಿಮೀರಿದ ಮೊಬೈಲ್ ಬಳಕೆ ಪರಸ್ಪರ ಪ್ರೀತಿ, ಸಂಬಂಧವನ್ನೇ ಕೊಲ್ಲುತ್ತಿದೆ. ಸಮಾಜದಲ್ಲಿ ಸಾಮಾಜಿಕ ಜಾಲತಾಣದಿಂದ ಬಹಳ ಅಪಪ್ರಚಾರ ನಡೆಯುತ್ತಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಜಡ್ಜ್ ಇದ್ದಾನೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡರೆ ಅದಕ್ಕಿಂತ ದೊಡ್ಡತನ ಬೇರೊಂದಿರಲಾರದು ಎಂದು ಸುಧೀಂದ್ರರಾವ್ ತಿಳಿಸಿದರು.

ಸಮಾರಂಭದಲ್ಲಿ ನಿವೇದಿತಾ ಶಿವಕಾಂತ್ ಸಿದ್ನಾಳ್ ಸೇರಿ ವಿವಿಧ ಕ್ಷೇತ್ರದ ಸಾಧಕರಿಗೆ ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತಿತರ ಸಾಧಕರಿಗೆ ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಆದ್ಯಕ್ಷೆ ನಿತ್ಯಾ, ಶ್ರೀಮುತ್ತೇಶ್ವರ ಸ್ವಾಮೀಜಿ, ಕೆಎಸ್ ಅಧಿಕಾರಿ ದೀಪಾ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

"ನಮ್ಮ ತಂದೆ ದಿವಂಗತ ಶಿವಕಾಂತ ಸಿದ್ನಾಳ್ ಅವರಿಗೆ ಆದಿತ್ಯಾ ಡೈರಿ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಕನಸಿತ್ತು. ಆ ಕನಸನ್ನು ನಮ್ಮ ಅಜ್ಜ ಡಾ.ವಿಜಯ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ನಾನು ನಮ್ಮ ತಾಯಿ ಹಾಗೂ ಅಣ್ಣ ನನಸು ಮಾಡಲು ಶ್ರಮಿಸುತ್ತಿದ್ದೇವೆ. ಸತ್ಯ, ಪ್ರಮಾಣಿಕತೆ ಇದ್ದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ನಮ್ಮ ಅಜ್ಜನ ಮಾತೇ ನಮಗೆ ಸ್ಪೂರ್ತಿ. ಇಂದು ನನಗೆ ದೊರೆತಿರುವ ಪ್ರಶಸ್ತಿ ಮತ್ತಷ್ಟು ಸಾಧಿಸಲು ಪ್ರೇರಣೆ ನೀಡಿದೆ." -ನಿವೇದಿತಾ ಸಿದ್ನಾಳ್, ವಿಜಯಕಾಂತ ಡೈರಿ ಉಪಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net