ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ

Anganavadi-Press-Meet
Published on

ಕಾರವಾರ: ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ 2023 ರ ಏಪ್ರಿಲ್‌ನಿಂದ ಗ್ರಾಚುಟಿ ಸೌಲಭ್ಯ ನೀಡಲಾಗುವುದು ಎಂದು ಆದೇಶ ಹೊರಡಿಸುವ ಮೂಲಕ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ಜಿಲ್ಲೆಯ ಕೆಲ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅನಿತಾ ಶೇಟ್ ಹಾಗೂ ಇತರರು 2011 ರಿಂದ ಅನ್ವಯವಾಗುವಂತೆ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚುಟಿ ಸೌಲಭ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ 2022 ರಲ್ಲಿ ಆದೇ ನೀಡಿತು. ಅದನ್ನು ಇತರ ಕೆಲವು ರಾಜ್ಯಗಳು ಪಾಲಿಸಿ, 2011 ರಿಂದ ನಿವೃತ್ತರಾದ ಎಲ್ಲರಿಗೂ ಈ ಸೌಲಭ್ಯ ನೀಡುತ್ತಿವೆ. ಆದರೆ, ಕರ್ನಾಟಕ ಸರ್ಕಾರವು 2023 ರ ಫೆಬ್ರವರಿಯಲ್ಲಿ ಆದೇಶ ಹೊರಡಿಸಿದೆ. ಇದರಿಂದ 2011 ರಿಂದ 2022 ರವರೆಗೆ ನಿವೃತ್ತರಾದ ಕಾರ್ಯಕರ್ತೆಯರಿಗೆ ತೀವ್ರ ಅನ್ಯಾಯವಾಗುತ್ತದೆ. ಇದರನ್ನು ವಿರೋಽಸ ನಾವು ಧಾರವಾಡ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದರು.
ಹಿಂದೆ ಅಂಗನವಾಡಿ ಕಾರ್ಯಕರ್ತೆಯರು ಅಲ್ಪ 140 ರೂ. ಸಹಾಯಕಿಯರು ಮಾಸಿಕ 40 ರೂ. ವೇತನ ಪಡೆದು, ಕೆಲಸ ಮಾಡಿದ್ದಾರೆ. ಆದರೆ, ಅಂಥವರಿಗೆ ಅನ್ಯಾಯವಾಗುತ್ತಿದೆ. ಎನ್‌ಪಿಎಸ್‌ನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ವಯವಾಗುವಂತೆ ಮಾಡಲಾಗಿದೆ. ಆದರೆ, ಅದರಿಂದ ನಿವೃತ್ತಿಯ ನಂತರ ಖಚಿತ ಮೊತ್ತ ಸಿಗುತ್ತಿಲ್ಲ. ಇನ್ನು ಇಡಿಗಂಟನ್ನು ಕಾರ್ಯಕರ್ತೆಯರಿಗೆ 50 ಸಾವಿರ ರೂ., ಸಹಯಕಿಯರಿಗೆ 30 ಸಾವಿರ ರೂ. ನೀಡಬೇಕು ಎಂದು ಒಮ್ಮೆ ಸರ್ಕಾರ ಆದೇಶ ಹೊರಡಿಸಿದ್ದರೂ, ಆ ಆದೇಶವೂ ಜಾರಿಯಾಗುತ್ತಿಲ್ಲ ಎಂದರು.
ಕೆಲವು ಅಂಗನವಾಡಿ ಸಂಘಟನೆಗಳ ಮುಖಂಡರು 3 ಸಾವಿರ ರೂ. ಪಡೆದು, ಗ್ರಾಚುಟಿ ಸೌಲಭ್ಯ ಕೊಡಿಸಲಾಗುವುದು ಎಂದು ಅರ್ಜಿ ಭರ್ತಿ ಮಾಡಿಸಿಕೊಂಡಿದ್ದಾರೆ. ಆದರೆ, ಸರ್ಕಾರದ ಆದೇಶದ ಪ್ರಕಾರ ಅನರ್ಹರಾದವರಿಂದಲೂ 1500 ರೂ. ಪಡೆದು ಅರ್ಜಿ ಭರ್ತಿ ಮಾಡುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ. ಅಂಥದಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮರುಳಾಗಬಾರದು ಎಂದು ಅನಿತಾ ಶೇಟ್ ಮನವಿ ಮಾಡಿದರು. ಅಂಗನವಾಡಿಗಳ ನಿವೃತ್ತ ನೌಕರರಾದ ರೋಹಿಣಿ ಶಂಕರ ನಾಯ್ಕ, ಜಾನಕಿ ರಾಮ ಶೆಟ್ಟಿ, ಜ್ಯೋತಿ ಮಹಾಲೆ, ಮಹಾಲಕ್ಷ್ಮೀ ಗೌಡ, ಹೇಮಾ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net