ಮಕ್ಕಳಿಗೆ ಎಳವೆಯಲ್ಲೇ ಸಂಸ್ಕಾರ ಕಲಿಸಿ

28ark2
Published on

ಅರಕಲಗೂಡು : ಸನಾತನ ಸಂಸ್ಕೃತಿ ತವರಾದ ನಮ್ಮ ನಾಡಿನ ಯುವಜನರಲ್ಲಿ ಸಂಸ್ಕಾರದ ಕೊರತೆ ಕಾಡುತ್ತಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಾಜೀ ಹೇಳಿದರು.ಪಟ್ಟಣದ ಕೋಟೆ ನಿವೇದಿತಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ, ನಿವೇದಿತಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಎಳವೆಯಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಅವರು ಭವಿಷ್ಯದಲ್ಲಿ ಬೆಲೆ ಕಟ್ಟಲಾಗದಷ್ಟು ಮೌಲ್ಯಯುತವಾಗಿ ಬದುಕಿ ದೇಶಕ್ಕೆ ಆಸ್ತಿ ಆಗುತ್ತಾರೆ. ಸಂಸ್ಕಾರದ ಕೊರತೆ ಕಂಡುಬಂದಿರುವ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಪಾಲಕರು ಮತ್ತು ಶಿಕ್ಷಕರುಗಳು ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಜ್ಞಾನ, ಭಕ್ತಿ, ಧರ್ಮ, ಕರ್ಮಗಳ ಬಗ್ಗೆ ನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದೇ ಹಿರಿಯರ ಕರ್ತವ್ಯವೂ ಆಗಬೇಕು. ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿ ನಿರ್ವಹಣೆ ಮೇಲೆ ಮುಂದಿನ ಪೀಳಿಗೆ ಸಂಸ್ಕಾರ ನಿರ್ಧಾರವಾಗಲಿದೆ ಎಂದವರು ನುಡಿದರು.ನಿವೇದಿತಾ ವಿದೇಶಿ ಮಹಿಳೆಯಾದರೂ ಭಾರತೀಯ ಸಂಸ್ಕೃತಿ, ಸಂಸ್ಕಾರದ ಪ್ರತೀಕವಾದಳು. ತನ್ನ ದೇಶವನ್ನ ಬಿಟ್ಟು ಭಾರತದಲ್ಲಿ ಸೇವೆ ಮಾಡಿದಳು. ಸ್ವಾಮಿ ವಿವೇಕಾನಂದರ ಶಿಷ್ಯತ್ವ ಸ್ವೀಕರಿಸಿ ಸ್ತ್ರೀಯರ ಶಿಕ್ಷಣಕ್ಕೆ ಬಹುದೊಡ್ಡ ಕೊಡುಗೆ ನೀಡಿದಳು. ಇದು ಇಂದಿಗೂ ಮಾದರಿಯಾಗಿದೆ ಎಂದರು.
ಆರೋಗ್ಯದ ಕಡೆ ಗಮನ ಹರಿಸಿ:ನಿವೇದಿತಾ ಪ್ರಶಸ್ತಿ ಸ್ವೀಕರಿಸಿದ ಪಶು ಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವರಾಮ್ ಮಾತನಾಡಿ, ಪಾಲಕರು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅನಿವಾರ್ಯತೆ ಇದೆ ಎಂದರು. ಮಕ್ಕಳಿಗೆ ಓದುವ ಒತ್ತಡ ಹೆಚ್ಚುತ್ತಿರುವುದರಿಂದ ಅಪೌಷ್ಟಿಕತೆ ಸಮಸ್ಯೆಗೂ ಕಾರಣವಾಗುತ್ತಿದೆ. ಓದಿನೊಂದಿಗೆ ಆಟ, ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಬೇಕು ಎಂದರು.ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಆ.ರಾ ಸುಬ್ಬರಾವ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿಷ್ಣು ಪ್ರಕಾಶ್, ಮುಖ್ಯ ಶಿಕ್ಷಕಿ ರಾಗಿಣಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net