

ಗೋಕರ್ಣ: ಹತ್ತಿರದ ಗಂಗಾವಳಿ ಮತ್ತು ಅಂಕೋಲಾ ಬಳಿಯ ಮಂಜಗುಣಿ ನಡುವೆ ಗಂಗಾವಳಿ ನದಿಗೆ ನೂತನವಾಗಿ ನಿರ್ವಿುಸಲಾದ ಸೇತುವೆ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಇದನ್ನು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಭಾನುವಾರ ವೀಕ್ಷಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಗುತ್ತಿಗೆದಾರ ಕಂಪನಿಯ ಪ್ರಮುಖರ ಜೊತೆ ಅವರು ರ್ಚಚಿಸಿ ಅಗತ್ಯ ಮಾಹಿತಿ ಪಡೆದರು.
ಈ ಕುರಿತು ಮಾತನಾಡಿದ ನಿವೇದಿತ್ 2018ರಲ್ಲಿ ಪ್ರಾರಂಭವಾದ ಸೇತುವೆ ಕಾಮಗಾರಿ ಏಪ್ರಿಲ್ ಅಂತ್ಯದ ವೇಳೆಗೆ ಮುಗಿಯುವ ನಿರೀಕ್ಷೆಯಿದೆ. 900 ಮೀ ಅಂದಾಜು ಉದ್ದದ ಈ ಸೇತುವೆಯ ಡಾಂಬರೀಕರಣ ಮುಕ್ತಾಯವಾಗಿದೆ. ಸೇತುವೆಯ ಎರಡೂ ಬದಿಯಲ್ಲಿನ ಕೂಡು ರಸ್ತೆಯ ಕೆಲಸ ನಡೆಯುತ್ತಿದ್ದು, ಈ ಮಾಸಾಂತ್ಯಕ್ಕೆ ಮುಗಿಯುವ ಭರವಸೆಯನ್ನು ಸಂಬಂಧಿಸಿದ ಗುತ್ತಿಗೆದಾರರ ಪರವಾಗಿ ನೀಡಲಾಗಿದೆ. ಈ ಸೇತುವೆಯಿಂದ ಗೋಕರ್ಣ ಮತ್ತು ಅಂಕೋಲಾ ಮಧ್ಯದ ಅಂತರ ಭಾರೀ ಕಡಿಮೆಯಾಗುವುದರಿಂದ ಮಹಾರಾಷ್ಟ್ರ, ಗೋವಾ ಮತ್ತು ರಾಜ್ಯದ ಉತ್ತರ ಭಾಗದ ಹುಬ್ಬಳ್ಳಿ ಮತ್ತಿತರೆಡೆಗಳಿಂದ ಗೋಕರ್ಣಕ್ಕೆ ಬರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹೊಸ ವ್ಯವಸ್ಥೆಯಿಂದ ಗೋಕರ್ಣ ಮತ್ತು ಅಂಕೋಲಾ ಭಾಗದ ಗ್ರಾಮಾಂತರಗಳಲ್ಲಿ ಪ್ರವಾಸೋದ್ಯಮದ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಆಳ್ವಾ ವಿವರಿಸಿದರು.
ಮೇ ಮೊದಲ ವಾರದಲ್ಲಿ ಸೇತುವೆ ಉದ್ಘಾಟನೆ ನಡೆಯುವ ಸಾಧ್ಯತೆಯಿದ್ದು, ಆ ತರುವಾಯದಲ್ಲಿ ಸಾರ್ವಜನಿಕರಿಗೆ ಇದನ್ನು ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ವೆಂಕಟ್ರಮಣ ಗೌಡ, ಇತರರಿದ್ದರು.