ರಾಗಿ ಬೆಳೆಗಾರರಿಗೆ ನಿವಾರ್ ಸಂಕಷ್ಟ ; ಕಟಾವಿಗೆ ಬಂದಿದ್ದ ಬೆಳೆ ಹಾನಿ

29ank news and photos 06(1)
Published on

ಆನೇಕಲ್ : ತಾಲೂಕಿನ ರೈತರಿಗೆ ನಿವಾರ್ ಚಂಡಮಾರುತ ಭಾರಿ ಪೆಟ್ಟು ನೀಡಿದ್ದು ಅಪಾರ ಪ್ರಮಾಣದ ರಾಗಿ ಬೆಳೆ ನಷ್ಟವಾಗಿ, ರೈತರು ಪರಿತಪಿಸುವಂತಾಗಿದೆ.

ಆನೇಕಲ್ ಭಾಗದ ರೈತರು ಹೆಚ್ಚಾಗಿ ರಾಗಿ ಬೆಳೆ ನೆಚ್ಚಿಕೊಂಡಿದ್ದಾರೆ. ಆದರೆ ಈ ಬಾರಿ ಕಟಾವು ಮಾಡುವ ಸಂದರ್ಭದಲ್ಲಿ ಮಳೆಯಾದ ಪರಿಣಾಮ, ಕೊಯ್ಲು ಮಾಡಿದ್ದ ರಾಗಿ ತೊಯ್ದಿದೆ. ಇನ್ನೊಂದೆಡೆ ಕೊಯ್ಲು ಮಾಡಲಾಗದೆ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಎರಡು ದಿನ ಸುರಿದ ಮಳೆಯಿಂದಾಗಿ ಹೊಲಗದ್ದೆಗಳಲ್ಲಿ ನೀರು ನಿಂತಿದೆ. ಇದರಿಂದಾಗಿ, ಆನೇಕಲ್ಲಿನ ಇಂಡ್ಲವಾಡಿ, ಸಮಂದೂರು, ಸರ್ಜಾಪುರ, ಬಳ್ಳೂರು, ಮಾಯಸಂದ್ರ ಸುತ್ತಮುತ್ತಲ ಪ್ರದೇಶದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಮೇವಿಗೂ ಯೋಗ್ಯವಾಗಿಲ್ಲ : ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕಟಾವಿನ ವೇಳೆಯೇ ಮಳೆಯಾಗಿರುವ ಕಾರಣ, ರಾಗಿ ಹುಲ್ಲು ತಿನ್ನಲು ಯೋಗ್ಯವಾಗಿಲ್ಲದಷ್ಟು ಹಾಳಾಗಿದೆ. ತಾಲೂಕಿನಾದ್ಯಂತ ರೈತರು ನಷ್ಟ ಅನುಭವಿಸಿದ್ದರೂ, ಕೃಷಿ ಇಲಾಖೆ ಅಧಿಕಾರಿಗಳು ಇತ್ತಕಡೆ ಗಮನಹರಿಸಿಲ್ಲ. ರೈತರಿಗೆ ಮಾಹಿತಿ ನೀಡುವುದಿರಲಿ, ಸಾಂತ್ವನವನ್ನೂ ಹೇಳಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಗಿ ಕೊಯ್ಲು ಮಾಡಲು ತಮಿಳುನಾಡಿನಿಂದ ಕೂಲಿಕಾರರನ್ನು ಕರೆತರಲಾಗಿತ್ತು. ಅವರೆಲ್ಲರಿಗೂ ದಿನಕ್ಕೆ 500ರಿಂದ 600 ರೂ. ಕೂಲಿ ಕೊಟ್ಟು ಕಟಾವ್ ಮಾಡಲಾಗಿತ್ತು. ಆದರೆ ಮಳೆಯಿಂದಾಗಿ ಅತ್ತ ಬೆಳೆಯೂ ಇಲ್ಲ, ಸಾಲಸೋಲ ಮಾಡಿ ಹಾಕಿದ ಹಣವೂ ಇಲ್ಲದಂತಾಗಿದೆ. ಮಹದೇವಮ್ಮ, ಇಂಡ್ಲವಾಡಿ ರೈತ ಮಹಿಳೆ ಇಂಡ್ಲವಾಡಿ ಭಾಗದ ನೂರಾರು ರೈತರು ಮಳೆಯಿಂದಾಗಿ ರಾಗಿ ಬೆಳೆ ಕಳೆದುಕೊಂಡಿದ್ದಾರೆ, ಸರ್ಕಾರ ಸೂರ್ಯನಗರ ಯೋಜನೆಗಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ, ಕೃಷಿ ಇಲಾಖೆಯಿಂದಲೂ ಯಾವುದೇ ನೆರವು ಕೊಡುವುದಿಲ್ಲ ಎಂದು ಹೇಳುತ್ತಿದೆ. ಅತ್ತ ಬೆಳೆಯೂ ಇಲ್ಲ, ಇತ್ತ ಸರ್ಕಾರವೂ ನಮ್ಮ ನೆರವಿಗೆ ಮುಂದಾಗುತ್ತಿಲ್ಲ. ದೊಡ್ದಮರಿಯಪ್ಪ ಕಾಡುಜಕ್ಕನಹಳ್ಳಿ ರೈತ ತಾಲೂಕಿನಾದ್ಯಂತ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಅವರಿಗೆ ನೆರವು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮಹದೇವಯ್ಯ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net