ನಿತ್ಯ ವಚನೋತ್ಸವ 5ರಿಂದ

2 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣಮಾಸ ನಿಮಿತ್ತ ಬಸವ ಕೇಂದ್ರ ವತಿಯಿಂದ ಒಂದು ತಿಂಗಳ ಕಾಲ ಪ್ರತಿನಿತ್ಯ ವಚನೋತ್ಸವ ಕಾರ್ಯಕ್ರಮವನ್ನು ಶಹರದ 15 ಬಡಾವಣೆಯ 500ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲಕ್ಕೆ ಹಾಗೂ ಭಾನುವಾರ ಶರಣ ಸಂಗಮ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ಡಾ. ವೀರಣ್ಣ ರಾಜೂರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಿಚಾರಧಾರೆಯನ್ನು ಮನೆ ಮನಗಳಿಗೆ ತಲುಪಿಸಲು 25 ವರ್ಷಗಳಿಂದ ನಿರಂತರವಾಗಿ ಶ್ರಾವಣ ಮಾಸದಲ್ಲಿ ಎಲ್ಲ ಬಡಾವಣೆಗಳ ಮನೆಯಲ್ಲಿ ವಚನೋತ್ಸವ ನಡೆಸಲಾಗುತ್ತಿದೆ. ಈ ಬಾರಿ ಮಕ್ಕಳಿಗೆ ವಚನ ಲೇಖನ ಸ್ಪರ್ಧೆ ಏರ್ಪಡಿಸಿದ್ದು, ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ ನೀಡಲಾಗುವುದು. ಶಾಲಾ ಮಕ್ಕಳಿಗೆ ಬಸವಾದಿ ಶರಣ ಶರಣೆಯರ ರೂಪಕಗಳು, ಛದ್ಮವೇಷ ಸ್ಪರ್ಧೆ ನಡೆಯಲಿವೆ ಎಂದರು.
ಆ. 5ರಂದು ಸಂಜೆ 5 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ವಚನೋತ್ಸವ ಉದ್ಘಾಟನೆ ಹಾಗೂ ವಚನ ಪರಿಮಳ ಭಾಗ-7 ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದ್ದು, ಡಾ. ವೀರಣ್ಣ ರಾಜೂರ ಉದ್ಘಾಟಿಸುವರು. ಡಾ.ವಿಜಯಲಕ್ಷ್ಮೀ ಅಮ್ಮಿನಭಾವಿ ಗ್ರಂಥ ಬಿಡುಗಡೆಗೊಳಿಸುವರು. ಬಸವಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ ಹಾಗೂ ಶಂಕರಣ್ಣ ಕೋರಿಶೆಟ್ಟರ ಉಪಸ್ಥಿತರಿರುವರು. ಚಿಂತಕ ಶಿವಣ್ಣ ಶರಣ್ಣವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬಸವ ಪಂಚಮಿ ಶರಣೆ ಅಕ್ಕನಾಗಮ್ಮ ಸ್ಮರಣೋತ್ಸವ ನಿಮಿತ್ತ ಆ. 8ರಂದು ಬೆಳಗ್ಗೆ 10 ಗಂಟೆಗೆ ಹೊನ್ನಾಪುರ ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನ ಆವರಣದಲ್ಲಿ ಹಾಲು, ಉಂಡಿ ವಿತರಣೆ ಮಾಡಲಾಗುವುದು. ಆ.11ರ ಬೆಳಗ್ಗೆ 10 ಗಂಟೆಗೆ ಆರ್​ಎಲ್​ಎಸ್​ ಕಾಲೇಜಿನಲ್ಲಿ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ಬರೆಯುವ ಸ್ಪರ್ಧೆ ನಡೆಯಲಿದೆ ಎಂದರು.
ನಿತ್ಯ ಸಂಜೆ 6ಗಂಟೆಯಿಂದ ಮನೆಗಳಲ್ಲಿ ವಚನೋತ್ಸವ ನಡೆಯಲಿದೆ. ಸೆ. 1ರಂದು ಬೆಳಗ್ಗೆ 10.30ಕ್ಕೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಚನೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಬಸವಂತ ತೋಟದ, ಶಿವಣ್ಣ ಶರಣ್ಣವರ, ಸಿದ್ದರಾಮಣ್ಣ ನಡಕಟ್ಟಿ, ಶಕುಂತಲಾ ಮನ್ನಂಗಿ, ಶೇಖರ ಕುಂದಗೋಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net