ನಿರುಪಯುಕ್ತ ಶುದ್ಧೀಕರಣ ಘಟಕ

nirttur new
Published on

ಉಡುಪಿ: ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ನಿಟ್ಟೂರಿನ ಶುದ್ಧೀಕರಣ ಘಟಕ ಸಂಪೂರ್ಣ ನಿರುಪಯುಕ್ತಗೊಂಡಿದ್ದು, ಶುದ್ಧೀಕರಣ ಕೆಲಸ ಸ್ಥಗಿತವಾಗಿದೆ. ನಗರದ ಒಳಚರಂಡಿ ನೀರನ್ನು ಪಂಪಿಂಗ್ ಮಾಡಿ ನಿಟ್ಟೂರು ಶುದ್ಧೀಕರಣ ಘಟಕಕ್ಕೆ ಪೂರೈಸುವಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುವ ವೆಟ್‌ವೆಲ್‌ಗಳು ಸ್ಥಗಿತಗೊಂಡ ಪರಿಣಾಮ ಮತ್ತು ಘಟಕದ ಗ್ರಿಪ್ಪರ್‌ಗಳು ಹಾಳಾದ ಪರಿಣಾಮ ಶುದ್ಧೀಕರಣ ಘಟಕ ಇದ್ದೂ ಇಲ್ಲದಂತಾಗಿದೆ. ನಗರದ ದ್ರವ ತ್ಯಾಜ್ಯವನ್ನು ಶುದ್ಧೀಕರಿಸಿ ಅದನ್ನು ಇಂದ್ರಾಣಿ ನದಿ ಮೂಲಕ ಸಮುದ್ರಕ್ಕೆ ಬಿಡುವುದು ಯೋಜನೆಯ ಮುಖ್ಯ ಆಶಯವಾಗಿತ್ತು. ಸ್ಥಳೀಯರ ಪ್ರಕಾರ ಪ್ರಸ್ತುತ ಶುದ್ಧೀಕರಣದ ಎಲ್ಲ ಗ್ರಿಪ್ಪರ್‌ಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿವೆ. ಹಲವು ವರ್ಷ ನೀರನ್ನು ಶುದ್ಧೀಕರಿಸದೆ ನೇರವಾಗಿ ನದಿಗೆ ಬಿಡಲಾಗುತ್ತಿತ್ತು ಎಂದು ದೂರುತ್ತಾರೆ.

5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

ನಿಟ್ಟೂರಿನ 10 ಎಕರೆ ವಿಶಾಲ ಜಾಗದಲ್ಲಿ ಎಡಿಬಿ ಅನುದಾನದಿಂದ 5.5 ಕೋಟಿ ರೂ. ವೆಚ್ಚದಲ್ಲಿ ಕುಡ್ಸೆಂಪ್ ಈ ಘಟಕವನ್ನು 2007ರಲ್ಲಿ ನಿರ್ಮಿಸಿತ್ತು. ಈ ಘಟಕ ದಿನಕ್ಕೆ 12 ಎಂಎಲ್‌ಡಿ (ಮಿಲಿಯನ್ ಲೀಟರ್) ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಶುದ್ಧೀಕರಿಸುವ ಪ್ರಮುಖ ಯಂತ್ರ ಘಟಕ ಐದು ಗ್ರಿಪ್ಪರ್‌ಗಳನ್ನು ಘಟಕ ಹೊಂದಿದೆ. ಸದ್ಯ ಇದರಲ್ಲಿ ಎರಡು ಮಾತ್ರ ಸುಸ್ಥಿತಿಯಲ್ಲಿವೆ. ಮೂರು ಕೆಟ್ಟಿವೆ ಎಂದು ಮೂಲಗಳು ತಿಳಿಸಿವೆ.

ವೆಟ್‌ವೆಲ್‌ಗಳು ಕಾರ್ಯಸ್ಥಗಿತ

ನಗರದಲ್ಲಿ ಕೊಳಚೆ ನೀರು ಪಂಪಿಂಗ್ ಮಾಡುವ ಪ್ರಮುಖ ವೆಟ್‌ವೆಲ್‌ಗಳು ಕೆಲಸವನ್ನು ಸ್ಥಗಿತಗೊಳಿಸಿದ್ದು, ಇದು ಶುದ್ಧೀಕರಣ ಘಟಕ ಸೇರದೆ ನೇರವಾಗಿ ಇಂದ್ರಾಣಿ ನದಿಗೆ ಸೇರುತ್ತಿದೆ. ಈ ಮೂಲಕ ಇಂದ್ರಾಣಿ ನದಿ ಮತ್ತಷ್ಟು ಕಲ್ಮಶವಾಗುತ್ತಿದೆ. ಎರಡು ತಿಂಗಳಿನಿಂದ ನಿಟ್ಟೂರಿನಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಕೊಳಚೆ ನೀರು ಪೂರೈಕೆಯಾಗುತ್ತಿಲ್ಲ. ಕೊಳಚೆ ನೀರು ಎಸ್‌ಟಿಪಿ (ಶುದ್ಧೀಕರಣ ಘಟಕ)ಗೆ ಪಂಪಿಂಗ್ ಮಾಡುವುದನ್ನು ನಿಲ್ಲಿಸಲಾಗಿದೆ. ಈ ಎರಡು ಕಾರಣಗಳಿಂದಾಗಿ ಕೊಳಚೆ ನೀರು ನೇರವಾಗಿ ಇಂದ್ರಾಣಿ ಒಡಲನ್ನು ಸೇರುತ್ತಿದೆ. ಕಾಮಗಾರಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ನಗರದ ಕೊಳಚೆ ಶುದ್ಧೀಕರಿಸಿ ಸಮುದ್ರಕ್ಕೆ ಬಿಡುವ ಉದ್ದೇಶದಿಂದ ನಿಟ್ಟೂರಿನಲ್ಲಿ ಶುದ್ಧೀಕರಣ ಘಟಕ ಆರಂಭಿಸಲಾಗಿತ್ತು. ವೆಟ್‌ವೆಲ್, ಪೈಪ್‌ಲೈನ್ ಕಾಮಗಾರಿ ಮುಗಿದ ಬಳಿಕ. ಘಟಕವನ್ನು ಮುಂಚಿನಂತೆ ವ್ಯವಸ್ಥಿತವಾಗಿಸಲಾಗುವುದು. ಶುದ್ಧೀಕರಿಸಿದ ನೀರನ್ನು ನಗರದಲ್ಲಿರುವ ನೆಡುತೋಪುಗಳಿಗೆ ಬಳಕೆ ಮಾಡಲಾಗುವುದು.

ಸುಮಿತ್ರಾ ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net