

ಉಡುಪಿ: ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಕರಾವಳಿಯ ಅಪೂರ್ವಕಲೆ ಯಕ್ಷಗಾನವನ್ನು ಅಭ್ಯಾಸ ಮಾಡಿ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಮಾಜಕ್ಕೆ ಆಸ್ತಿಯಾಗಬೇಕೆಂಬುದು ಯಕ್ಷಶಿಕ್ಷಣದ ಆಶಯ ಎಂದು ನಿಟ್ಟೂರು ಎಜುಕೇಶನಲ್ ಸೊಸೈಟಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.
ನಿಟ್ಟೂರು ಪ್ರೌಢಶಾಲೆಯ ಸನಿಹದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ 60 ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ತರಗತಿ ಉದ್ಘಾಟಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಖ್ಯಾತಿಯ ಯಕ್ಷಗಾನ ಕಲಾವಿದ ಬಿ. ಸಂಜೀವ ಸುವರ್ಣ ಗುರುಗಳಾಗಿ ಲಭ್ಯವಾದದ್ದು ವಿದ್ಯಾರ್ಥಿಗಳ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಯಕ್ಷಶಿಕ್ಷಣದ ಮತ್ತು ಸೊಸೈಟಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಭೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎಸ್. ವಿ.ಭಟ್, ಶಿಕ್ಷಕರಾದ ಎಚ್.ಎನ್.ಶೃಂಗೇಶ್ವರ, ಸೀಮಾ, ಅಶೋಕ ಎಂ., ಹಳೆ ವಿದ್ಯಾರ್ಥಿಗಳಾದ ಪಿ. ದಿನೇಶ್ ಪೂಜಾರಿ, ಡಾ. ಪ್ರತಿಮಾ ಜಯಪ್ರಕಾಶ್ ಆಚಾರ್ಯ, ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ವಸತಿ ನಿಲಯದ ಮೇಲ್ವಿಚಾರಕ ಮಂಜುನಾಥ ರಾವ್ ವಂದಿಸಿದರು.