

ಉಡುಪಿ : ನಿಟ್ಟೂರು ಪ್ರೌಢಶಾಲೆಯ 10ನೇ ತರಗತಿಯ 71 ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರಶೇಖರ್ ನಾಯ್ಕ್ ಅವರ 2 ಗದ್ದೆಗಳಲ್ಲಿ ನೇಜಿ ನೆಟ್ಟು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಪ್ರತ್ಯೇಕ್ಷ ಅನುಭವ ದೊರೆಯುತ್ತಿದ್ದು, ಈ ಬಾರಿಯು ಕೂಡ ವಿದ್ಯಾರ್ಥಿಗಳು ಸುರಿಯುವ ಮಳೆಯೊಂದಿಗೆ ಕೆಸರು ತುಂಬಿದ ಗದ್ದೆಗೆ ಇಳಿದು ನೇಜಿ ನೆಟ್ಟರು. ಶಾಲೆಯಲ್ಲಿ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಗದ್ದೆಗಿಳಿದು ನಾಟಿ ಮಾಡುವ ಮೂಲಕ ಅನ್ನದಾತನ ಕಠಿಣ ಪರಿಶ್ರಮದ ಅನುಭವ ಪಡೆದರು. ಕೃಷಿ ಜೀವನ ಶೈಲಿಯ ಪರಿಚಯವಾಯಿತು.
ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕಿ ಅನಸೂಯ ಹಾಗೂ ಶಿಕ್ಷಕರಾದ ರಾಮದಾಸ್, ದೇವದಾಸ್ ಶೆಟ್ಟಿ, ಅಶೋಕ್, ಸೀಮಾ, ಚಿನ್ನಮ್ಮ ಭಾಗವಹಿಸಿದ್ದರು.